ಮೈಸೂರು

ಹಳೆ ನೋಟು ಬದಲಾವಣೆ: ತತ್ತರಿಸಿದ ಗ್ರಾಹಕ, ಸುಸ್ತಾದ ಬ್ಯಾಂಕ್ ಸಿಬ್ಬಂದಿ

ಹಳೆ ನೋಟು ಬದಲಾವಣೆ ಹಿನ್ನೆಲೆಯಲ್ಲಿ ಖೋಟಾನೋಟಿನ ಚಲಾವಣೆಗೆ ಅಂಕುಶ ಹಾಕಲು ಕೇಂದ್ರ ಸರ್ಕಾರವು ಕೈಗೊಂಡಿರುವ ಕ್ರಮಕ್ಕೆ ಕಪ್ಪು ಹಣ ದಾಸ್ತಾನುದಾರರಿಗೆ,  ಭ್ರಷ್ಟರಿಗೆ ಹಾಗೂ ತೆರಿಗೆ ವಂಚಿತರಿಗೆ ಬಿಸಿತುಪ್ಪವಾಗಿದೆ.

ನ.8ರ ರಾತ್ರಿ 8ಕ್ಕೆ ಪ್ರಧಾನಿ ಮೋದಿಯವರು ಕಪ್ಪು ಹಣ ದೇಶದಲ್ಲಿ ಸುವ್ಯವಸ್ಥಿತ ಆರ್ಥಿಕತೆಗಾಗಿ ಕ್ರಮ ಕೈಗೊಳ್ಳಲಾಗಿದ್ದು ಇಂದಿನಿಂದ ದೇಶದ ದೊಡ್ಡ ನೋಟುಗಳನ್ನು ಹಿಂಪಡೆಯಲಾಗುತ್ತಿದೆ ಎಂದು ಮಾಧ್ಯಮದಲ್ಲಿ ಪ್ರಸಾರವಾದ ತಕ್ಷಣವೇ ಕಾಳಧನಿಕರಿಗೆ ನಡುಕು ಶುರುವಾಗಿದ್ದು ಶ್ರೀಸಾಮಾನ್ಯನಿಗೆ ನಿತ್ಯ ಜೀವನಕ್ಕೆ ತಾಕಲಾಟ ಆರಂಭವಾಯಿತು.

ಟ್ಯಾಂಕ್ ತುಂಬಾ ಪೆಟ್ರೋಲ್ ಹಾಕಿಸಿದರೆ ಮಾತ್ರ 500ರ ನೋಟು ಸ್ವೀಕಾರ :

ಹೀಗೊಂದು ಮೌಖಿಕ ಆದೇಶದೊಂದಿಗೆ ಪೆಟ್ರೋಲ್ ಬಂಕ್‍ಗಳು ಕಾರ್ಯನಿರ್ವಹಿಸುತ್ತಿವೆ. ಪೆಟ್ರೋಲ್ ಬಂಕ್, ಆಸ್ಪತ್ರೆ ಹಾಗೂ ಇತರೆಡೆ ಹಳೆ ನೋಟುಗಳು ಚಲಾವಣೆಯಿದೆಯಾದರು ಚಿಲ್ಲರೆ ಆಭಾವದಿಂದ ಸರಾಗವಾಗಿ ಚಲಾವಣೆಗೊಳ್ಳುತ್ತಿಲ್ಲ, ನೂರು ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡು ಐದುನೂರು ರೂಪಾಯಿ ಚಿಲ್ಲರೆ ಕೇಳಿದರೆ ದೊರೆಯುವುದಿಲ್ಲ. ಕನಿಷ್ಠವೆಂದರೂ ಮೂನ್ನೂರು ರೂಪಾಯಿ ದರದ ಪೆಟ್ರೋಲ್ ಹಾಕಿಸಲೇಬೇಕು (ಫೂಲ್ ಟ್ಯಾಂಕ್) ಆಗ ಮಾತ್ರ ನೋಟು ಚಲಾವಣೆಯಾಗುವುದು. ಇನ್ನೂ ಆಸ್ಪತ್ರೆಯ ಕಾರ್ಯವೈಖರಿ ಇದಕ್ಕಿಂತ ಭಿನ್ನವೇನಾಗಿಲ್ಲ. ಅಲ್ಲಿಯೂ ಚಿಲ್ಲರೇ ಇಲ್ಲದೇ ರೋಗಿಗಳು ಪರಾದಾಡುತ್ತಿರುವುದು ಸಹಜವೆನ್ನುವಂತಾಗಿದೆ.

ಬೆಳಿಗ್ಗೆ ಆರರಿಂದಲೇ ಸರತಿ ಸಾಲು : ಕಳೆದ ಐದು ದಿನಗಳಿಂದಲೂ ರಜದಿನವೆನ್ನದೇ ಬೆಳಿಗ್ಗೆ ಆರರಿಂದಲೇ ಬ್ಯಾಂಕ್‍ಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ನೋಟು ಬದಲಾವಣೆಗಾಗಿ ಶ್ರಮಿಸುತ್ತಿರುವ ವಯೋವೃದ್ಧರು, ಅಂಗವಿಕಲರು, ಹಿರಿಯ ಮಹಿಳೆಯರು ಸೇರಿದಂತೆ ಕೆಲವೊಂದು ಕಡೆಗಳಲ್ಲಿ ಗರ್ಭಿಣಿಯರು ಸರದಿ ಸಾಲಿನಲ್ಲಿ ನಿಂತು ಸಂಕಷ್ಟ ಅನುಭವಿಸುತ್ತಿರುವುದು ಗೋಚರಿಸಿತು. ನೋಟು ಬದಲಾವಣೆಗೆ ನ.24ರವರೆಗೆ ಅವಧಿಯನ್ನು ವಿಸ್ತರಿಸಲಾಗಿದ್ದು ಸ್ಪಲ್ಪ ನಿರಾಳತೆಯನ್ನು ನೀಡಿದಂತಾಗಿದೆ. ಆದರೂ, ಬ್ಯಾಂಕ್‍, ಅಂಚೆ ಕಚೇರಿ ಎಟಿಎಂಗಳ ಮುಂದೆ ಸಾಲುಗಟ್ಟಿ ನಿಂತಿರುವವರ ಸಂಖ್ಯೆಯೇನು ಕಮ್ಮಿಯಾಗಿಲ್ಲ. ಅಂಗವಿಕಲರು, ವಿಧವೆಯರು, ವೃದ್ಧರು ಸರ್ಕಾರದಿಂದ ದೊರೆಯುವ ಮಾಸಿಕ ವೇತನಕ್ಕೂ ಪರದಾಡುವಂತಾಗಿಂತೆ. ಹಣಕ್ಕಾಗಿ ಉರಿ ಬಿಸಿಲಿನಲ್ಲೂ ಸರತಿಸಾಲಿನಲ್ಲಿ ನಿಲ್ಲುವ ವಯೋವೃದ್ಧರ ವೇದನೆ ವಿವರಿಸಲು ಅಸಾಧ್ಯ. ಅಗ್ರಹಾರದ 101 ಗಣಪತಿ ದೇವಸ್ಥಾನದ ಬಳಿಯಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮುಂದೆ ನೋಟು ಬದಲಾವಣೆಗಾಗಿ ಅರ್ಜಿಗಳ ಸಮೇತರಾಗಿ ಬೆಳಿಗ್ಗೆ 6:30 ರಿಂದಲೇ ಸರದಿ ಸಾಲಿನಲ್ಲಿ ನಿಂತಿರುವುದು ಕಂಡು ಬಂತು. ಅದರಲ್ಲಿ ಹೆಚ್ಚಿನ ಸಂಖ್ಯೆಯ ವಯೋವೃದ್ಧರೇ ಇರುತ್ತಿದ್ದರು.

ಬಿಸಿಲಿಗೆ ತತ್ತರಿಸಿದ ಗ್ರಾಹಕ :

sbi-generic-295ಈ ಬಾರಿ ಮಳೆಯ ಕೊರತೆಯಿಂದ ಸೂರ್ಯನ ತಾಪ ಹೆಚ್ಚಾಗಿದ್ದು, ಮಾರ್ಚ್‍ನಲ್ಲಿಯೇ ಇರಬೇಕಾಗಿದ್ದ ಬಿಸಿಲಿನ ಧಗೆ ಈಗಾಗಲೇ ತಳವೂರಿದೆ.  ಸರದಿ ಸಾಲಿನಲ್ಲಿ ನಿಲ್ಲುವ ಗ್ರಾಹಕನಿಗೆ  ಬಿಸಿಲಿನ ಬೇಗೆಯಿಂದ ತತ್ತರಿಸುವ ಗ್ರಾಹಕನಿಗೆ   ಶಾಮಿಯಾನ ಹಾಗೂ ಆಸನದ ವ್ಯವಸ್ಥೆಯನ್ನು ಕೆಲವೊಂದು ಬ್ಯಾಂಕ್‍ಗಳ ಮುಂದೆ ಕಲ್ಪಿಸಲಾಗಿತ್ತು. ಇದರಿಂದ ಅಂಗವಿಕಲರು, ಅನಾರೋಗ್ಯ ಪೀಡಿತರಿಗೆ ಹಾಗೂ ವಯೋವೃದ್ಧರು ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಇನ್ನೂ ಕೆಲವೊಂದು ಕಡೆ ಕುಡಿಯುವ ನೀರಿನ ಸರಬರಾಜು ಮಾಡುವ ಮೂಲಕ ಸಂಘಸಂಸ್ಥೆಗಳು ಮಾನವೀಯತೆ ಮೆರೆದವು.

ಹೈರಾಣಾದ ಬ್ಯಾಂಕ್ ಸಿಬ್ಬಂದಿ: ನಗರದ ಬಹುತೇಕ ಎಟಿಎಂಗಳಲ್ಲಿ ಹಣವಿಲ್ಲದ ಬೋರ್ಡ್ ಹಾಕಿ ಮುಚ್ಚಲಾಗಿದ್ದು ಇದರಿಂದ ಗ್ರಾಹಕರು ಮತ್ತಷ್ಟು ಪರದಾಡುವಂತಾಗಿದೆ. ಹಣದ ಪೂರೈಕೆ ಸಮಸ್ಯೆ ಬಗೆಹರಿಯುವವರೆಗೂ ಈ ತಳ್ಳಾಟ ನೂಕಾಟ ಸಾಮಾನ್ಯ. ಪರಿಸ್ಥಿತಿ ಸಹಜಸ್ಥಿತಿಗೆ ಬರಲು ಇನ್ನೆರಡು ವಾರಗಳಾಗುವದು ಎನ್ನುವುದು ಹೆಸರೇಳಲು ಇಚ್ಛಿಸದ ಬ್ಯಾಂಕ್ ಅಧಿಕಾರಿಯೊಬ್ಬರು ತಿಳಿಸಿ, ಕಳೆದ ಐದು ದಿನಗಳಿಂದಲೂ ನಿರಂತರವಾಗಿ ಬೆಳಗ್ಗೆ 10 ರಿಂದ ರಾತ್ರಿ 9ರವರೆಗೆ ಬ್ಯಾಂಕ್‍ಗಳು ಕಾರ್ಯನಿರ್ವಹಿಸುತ್ತಿದ್ದು ರಜಾ ದಿನದಲ್ಲಿಯೇ ಸೇವೆ ಮಾಡಿದ್ದು ಇದರಿಂದ ಸಿಬ್ಬಂದಿ ಹೈರಾಣಾಗಿದ್ದಾರೆ ಎಂದರು.

ಭಣಗುಟ್ಟಿದ ಮಾರುಕಟ್ಟೆಗಳು: ಹೊಸ ನೋಟುಗಳ ಕೊರತೆ ಹಾಗೂ ಹಳೆ ನೋಟುಗಳ ಚಲಾವಣೆ ನಿಷೇಧದಿಂದ ಎಂ.ಜಿ. ರಸ್ತೆಯ ಗನ್ ಮಾರ್ಕೆಟ್, ಆರ್.ಎಂ.ಸಿ. ಮಾರುಕಟ್ಟೆಯಲ್ಲಿ ವಹಿವಾಟು ವಿರಳವಾಗಿತ್ತು. ರೈತರು ವ್ಯಾಪಾರವಿಲ್ಲದೇ ನಿರುತ್ಸಾಹಿತರಾಗಿದ್ದರು. ತರಕಾರಿ ಕೊಳ್ಳುವುದಕ್ಕೆ ಜನರಿಲ್ಲದೆ ಮಾರುಕಟ್ಟೆಗಳು ಭಣಗುಡುತ್ತಿದ್ದವು.

Leave a Reply

comments

Related Articles

error: