
ಕರ್ನಾಟಕ
ಪೈಪೋಟಿಯ ಜೀವನವನ್ನು ಸವಾಲಾಗಿ ಸ್ವೀಕರಿಸಿ : ಡಿವೈಎಸ್ಪಿ ಸುಂದರ್ರಾಜ್ ಕಿವಿ ಮಾತು
ರಾಜ್ಯ(ಮಡಿಕೇರಿ) ಡಿ.10 : – ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪೈಪೋಟಿಯ ಜೀವನದ ಸವಾಲುಗಳನ್ನು ಎದುರಿಸುವ ಮೂಲಕ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕೆಂದು ಪೊಲೀಸ್ ಉಪ ಅಧೀಕ್ಷಕ ಸುಂದರರಾಜ್ ಕಿವಿಮಾತು ಹೇಳಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ 2016-17ನೇ ಸಾಲಿನ ಪ್ರತಿಭಾವಂತ ದಲಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಡಿವೈಎಸ್ಪಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಪೈಪೋಟಿ ಹೆಚ್ಚಾಗಿದ್ದು, ಈ ಸವಾಲುಗಳನ್ನು ಧೈರ್ಯವಾಗಿ ಎದುರಿಸಲು ವಿದ್ಯಾರ್ಥಿಗಳು ಮಾನಸಿಕ ತಯಾರಿಯನ್ನು ಮಾಡಿಕೊಳ್ಳಬೇಕು. ಪೋಷಕರು ಕೂಡ ತಮ್ಮ ಮಕ್ಕಳಿಗೆ ಶೈಕ್ಷಣಿಕ ಬೆಂಬಲವನ್ನು ನೀಡಿ ಉನ್ನತ ಮಟ್ಟದ ಹುದ್ದೆಗೇರಲು ಸ್ಫೂರ್ತಿ ತುಂಬಬೇಕೆಂದು ಸುಂದರ್ರಾಜ್ ಸಲಹೆ ನೀಡಿದರು.
ಪ್ರಬುದ್ಧ ನೌಕರರ ಒಕ್ಕೂಟದ ಅಧ್ಯಕ್ಷರಾದ ಡಾ. ವಿ.ಎಸ್.ಸತೀಶ್ ಮಾತನಾಡಿ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರು ದಲಿತ ಸಮುದಾಯದ ಭವಿಷ್ಯದ ದೃಷ್ಟಿಯಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ. ಆದರೆ ಇಂದು ಡಾ.ಅಂಬೇಡ್ಕರ್ ಅವರ ನೀರಿಕ್ಷೇಗಳು ಹುಸಿಯಾಗುತ್ತಿದ್ದು, ದಲಿತ ಸಮುದಾಯ ಎಚ್ಚೆತ್ತುಕೊಳ್ಳಬೇಕಾಗಿದೆ ಮತ್ತು ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮುದಾಯದ ಏಳಿಗೆಗಾಗಿ ಶ್ರಮಿಸಬೇಕಾಗಿದೆ ಎಂದರು.
ನಗರಸಭಾ ಪೌರಾಯುಕ್ತರಾದ ಬಿ.ಶುಭ ,ಜಿಲ್ಲಾ ಆಸ್ಪತ್ರೆಯ ಉಪಮುಖ್ಯ ವೈದ್ಯಾಧಿಕಾರಿ ಡಾ. ಹೆಚ್.ವಿ.ದೇವದಾಸ್,ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್, ಶ್ರೀರಾಜರಾಜೇಶ್ವರಿ ದೇವಾಲಯದ ಧರ್ಮಾಧಿಕಾರಿಗಳಾದ ಹೆಚ್.ಎಸ್. ಗೋವಿಂದಸ್ವಾಮಿ, ಉಪಾಧ್ಯಕ್ಷರಾದ ದಾಕ್ಷಾಯಿಣಿ ವಾಸುದೇವ್, ದಾನಿಗಳಾದ ಟಿ.ಆರ್.ವಾಸುದೇವ್, ವ್ಯಾಂಡಮ್ ಎಂಟರ್ ಪ್ರೈಸಸ್ನ ಮಾಲೀಕರಾದ ಕೆ.ಕೆ. ದಾಮೋದರ್ ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೆಎಎಸ್ ಪದವಿ ಪಡೆದು ಉನ್ನತ ಅಧಿಕಾರ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಲಕ್ಷ್ಮೀ ಚಂದ್ರಶೇಖರ್ ಹಾಗೂ 2016-17 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಉತ್ತಮ ಅಂಕ ಪಡೆದ ದಲಿತ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.(ಕೆಸಿಐ,ಎಸ್.ಎಚ್)