ಕರ್ನಾಟಕ

ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ನಡೆಯುವ ಹಿಂಸೆಯನ್ನು ಪ್ರಜ್ಞಾವಂತರು ತಡೆಯಬೇಕು : ಪರಶುರಾಮ್ ಎಫ್ ದೊಡ್ಡಮನಿ

ರಾಜ್ಯ(ಮಡಿಕೇರಿ)ಡಿ.10:- ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಹಿಂಸೆಯ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಇದನ್ನು ಪ್ರಜ್ಞಾವಂತರು ತಡೆಯಬೇಕು ಎಂದು ಇಲ್ಲಿನ ಜೆಎಂಎಫ್‍ಸಿ ಯ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ್ ಎಫ್ ದೊಡ್ಡಮನಿ ಅಭಿಪ್ರಾಯಿಸಿದರು.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಭಾನುವಾರ ಇಲ್ಲಿನ ಪ್ರತಿಕಾಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶ ನಮ್ಮದು. ಆದರೆ ಜಾತಿ ಮತ್ತು ಧರ್ಮಗಳ ನಡುವಿನ ಕಲಹದಿಂದ ಸಮಾಜದಲ್ಲಿ ಆಶಾಂತಿ ಮೂಡುತ್ತಿದೆ. ಇಂದು ಸಮಾಜದಲ್ಲಿ ಜಾತಿ ವ್ಯವಸ್ಥೆ ಬಲವಾಗಿ ಬೇರೂರಿರುವುದರಿಂದ ಸಮಾನತೆ ಮಾಯವಾಗಿದೆ. ಬಸವಣ್ಣ, ಅಂಬೇಡ್ಕರ್ ತತ್ವಾದರ್ಶ ಮತ್ತು ಸಿದ್ದಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಹಿಳೆಯರಿಗೆ ದೊರಕಬೇಕಾದ ಸಾಮಾಜಿಕ ನ್ಯಾಯ ಮತ್ತು ಹಕ್ಕುಗಳ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕರೆ ನೀಡಿದರು. ಕಿರಿಯ ಸಿವಿಲ್ ನ್ಯಾಯಾಧೀಶರಾದ ಶ್ಯಾಂಪ್ರಕಾಶ್ ಅವರು ಮಾನವ ಹಕ್ಕುಗಳು ಮತ್ತು ಪೊಲೀಸ್ ಕಾಯ್ದೆ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷರಾದ ಎಂ.ಬಿ.ಅಭಿಮನ್ಯು ಕುಮಾರ್ ಮಾತನಾಡಿ, ಮಾನವ ಹಕ್ಕುಗಳು ನಮಗೆ ಹುಟ್ಟಿನಿಂದಲೆ ಬಂದಿದೆ. ಸಮಾಜದಲ್ಲಿ ಯಾರನ್ನು ಘಾಸಿಗೊಳಿಸದೆ ಗೌರವಯುತವಾಗಿ ಬದುಕುವುದನ್ನು ರೂಢಿಸಿಕೊಳ್ಳಬೇಕು. ಮಾನವ ಹಕ್ಕುಗಳ ದಿನಾಚರಣೆಯನ್ನು ಪ್ರತಿಯೊಂದು ಸರಕಾರಿ ಇಲಾಖೆಗಳು ಮತ್ತು ಸಂಘಸಂಸ್ಥೆಗಳು ಆಚರಿಸಿದರೆ ಮಾತ್ರ ಮಾನವ ಹಕ್ಕುಗಳ ಜಾಗೃತಿ ಮೂಡುತ್ತದೆ ಎಂದರು.

ವೇದಿಕೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ರಮೇಶ್, ಭ್ರಷ್ಟಾಚಾರಿ ವಿರೋಧಿ ಸಂಸ್ಥೆಯ ಪದಾಧಿಕಾರಿಗಳಾದ ರಮೇಶ್, ಧರಣಿ, ಜ್ಯೋತಿ ಇದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: