ದೇಶ

ಉತ್ತರ ಪ್ರದೇಶದಲ್ಲಿ ಶಾಲೆಗಳಿಗೂ ಕೇಸರಿ ಬಣ್ಣ! ಸಿಎಂ ಯೋಗಿ ಆದಿತ್ಯನಾಥ್ ಪ್ರಭಾವ?

ಲಖನೌ (ಡಿ.11): ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಅಣತಿಯಂತೆ ಸರ್ಕಾರಿ ಶಾಲಾ ಪಠ್ಯಪುಸ್ತಕಗಳಿಗೆ ಕೇಸರಿ ಬಣ್ಣದಲ್ಲೇ ಮುದ್ರಣ ಮಾಡಲಾಗಿದೆ ಎನ್ನುವ ವರದಿಗಳ ನಂತರ ಇದೀಗ ಶಾಲೆಗಳ ಗೋಡೆಗಳಿಗೂ ಕೇಸರಿ ಬಣ್ಣ ಬಳಿಯಲಾಗುತ್ತಿದೆ.

ರಾಜಧಾನಿ ಲಖನೌದಿಂದ 300 ಕಿ.ಮೀ ದೂರದಲ್ಲಿರುವ ಪಿಲಿಭಿಟ್ ಜಿಲ್ಲೆಯಲ್ಲಿ 100 ಪ್ರಾಥಮಿಕ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯಲಾಗಿದೆ ಎಂದು ವರದಿಯಾಗಿದೆ. ಹಲವು ಕಡೆಗಳಲ್ಲಿ ಸ್ಥಳೀಯ ಗ್ರಾಮಸ್ಥರು ಇದನ್ನು ವಿರೋಧಿಸಿ, ತಡೆ ಒಡ್ಡಲು ಯತ್ನಿಸಿದ್ದರಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದೂ ವರದಿಗಳು ಹೇಳಿವೆ.

ಈ ಬಗ್ಗೆ ಶಿಕ್ಷಣಾಧಿಕಾರಿಗಳನ್ನು ಪ್ರಶ್ನಿಸಿದಾಗ, ಅಂತಹ ಯಾವುದೇ ಆದೇಶ ಹೊರಡಿಸಲಾಗಿಲ್ಲ ಎಂದು ಹೇಳಿದ್ದಾರೆ. ಗ್ರಾಮ ಪಂಚಾಯಿತಿಯ ಮುಖ್ಯಸ್ಥರ ಸಲಹೆಯ ಮೇರೆಗೆ ಕೆಲವು ಶಾಲಾ ಕಟ್ಟಡಗಳಿಗೆ ಕೇಸರಿ ಬಣ್ಣ ಬಳಿದಿರಬಹುದು ಎಂದು ಪಿಲಿಭಿಟ್ ಜಿಲ್ಲಾ ಶಿಕ್ಷಣಾಧಿಕಾರಿ ಹೇಳಿದ್ದಾರೆ.

8ನೇ ತರಗತಿವರೆಗಿನ ಎಲ್ಲ ಪಠ್ಯಪುಸ್ತಕಗಳ ಮುಖಪುಟಗಳಲ್ಲಿ ಕೇಸರಿ ಬಣ್ಣ ಬಳಸಲು ರಾಜ್ಯ ಸರ್ಕಾರ ಕೆಲವು ದಿನಗಳ ಹಿಂದೆಯಷ್ಟೇ ತೀರ್ಮಾನಿಸಿತ್ತು. ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳ ಚೀಲಗಳು ಈಗಾಗಲೇ ಕೇಸರಿ ಬಣ್ಣದ್ದಾಗಿವೆ.  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಮ್ಮ ಕಚೇರಿ ಇರುವ ಸಚಿವಾಲಯದ ಕಟ್ಟಡಕ್ಕೆ ಈಗಾಗಲೇ ಕೇಸರಿ ಬಣ್ಣ ಬಳಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ನಂತರ ಅವರು ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳಲ್ಲೆಲ್ಲ ಕೇಸರಿ ಬಣ್ಣ ಬಳಸಲು ಯತ್ನಿಸುತ್ತಿದ್ದಾರೆ. ರಾಜ್ಯ ಸರ್ಕಾರಿ ನಿಗಮದ ಬಸ್ಸುಗಳೂ ಈಗ ಕೇಸರಿಮಯವಾಗಿವೆ, ಸರ್ಕಾರದ ಈ ಯತ್ನವನ್ನು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ತೀವ್ರವಾಗಿ ಖಂಡಿಸಿವೆ.

ಮಾಯಾವತಿ ನೇತೃತ್ವದ ಬಿಎಸ್ಪಿ ಅಧಿಕಾರದಲ್ಲಿದ್ದಾಗ ಸರ್ಕಾರಿ ಕಟ್ಟಡಗಳು ಮತ್ತು ಬಸ್‍ಗಳಿಗೆ ನೀಲಿ ಬಣ್ಣ ಬಳಿಯಲಾಗಿತ್ತು.

(ಎನ್‍ಬಿಎನ್‍)

Leave a Reply

comments

Related Articles

error: