
ಕರ್ನಾಟಕಪ್ರಮುಖ ಸುದ್ದಿ
ಗೆಲ್ಲುವವರಿಗಷ್ಟೇ ಬಿಜೆಪಿ ಟಿಕೆಟ್; ವೀರಶೈವ ಮಹಾಸಭಾ ನಿರ್ಣಯಕ್ಕೆ ಬದ್ಧ: ಬಿಎಸ್ವೈ
ಕಲಬುರಗಿ (ಡಿ.11): ರಾಜ್ಯ ವಿಧಾನಸಭೆಗೆ ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಅಭ್ಯರ್ಥಿಯ ಗೆಲುವಿನ ಸರ್ವೆ ಮಾಡಿ ತಿಳಿದುಕೊಂಡ ನಂತರವೇ ಪಕ್ಷದ ಟಿಕೆಟ್ ನೀಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಚುನಾವಣೆಯಲ್ಲಿ ಗೆಲುವಿನ ಸಿದ್ಧತೆ ಮಾಡಿಕೊಳ್ಳುವಂತೆ ಅಭ್ಯರ್ಥಿಗಳಿಗೆ ಪರೋಕ್ಷವಾಗಿ ಸೂಚಿಸಲಾಗಿದೆ. ಆದರೆ ಸರ್ವೆಯಲ್ಲಿ ಮತಕ್ಷೇತ್ರದ ಜನತೆ ಬೇರೆ ಅಭ್ಯರ್ಥಿಯ ಪರ ಒಲವು ತೋರಿದರೆ ಅಭ್ಯರ್ಥಿಗಳನ್ನು ಬದಲಾಯಿಸಲಾಗುವುದು. ಗೆಲ್ಲುವ ಅಭ್ಯರ್ಥಿಗಷ್ಟೇ ಟಿಕೆಟ್ ನೀಡಲು ನಿರ್ಧರಿಸಿದ್ದು, ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಸರ್ವೆ ನಂತರ ಪ್ರಕಟಿಸಲಾಗುವುದು ಎಂದು ಹೇಳಿದರು.
ಪ್ರತ್ಯೇಕ ಧರ್ಮ: ವೀರೈಶೈವ ಮಹಾಸಭಾ ನಿರ್ಧಾರಕ್ಕೆ ಬದ್ಧ
ಸಿದ್ದಗಂಗಾ ಶ್ರೀಗಳು ಈಗಾಗಲೇ ಪ್ರತ್ಯೇಕ ಧರ್ಮದ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾ ಕೈಗೊಳ್ಳುವ ಅಂತಿಮ ನಿರ್ಣಯಕ್ಕೆ ಬಿಜೆಪಿ ಬದ್ಧವಾಗಿವೆ ಎಂದು ಬಿ.ಎಸ್.ಯಡಿಯೂರಪ್ಪ ಅವರು ಇದೇ ವೇಳೆ ಹೇಳಿದ್ದಾರೆ. ಈ ಮೂಲಕ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ತಮ್ಮ ಬೆಂಬಲವಿಲ್ಲ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಯಾತ್ರೆಯ ಕುರಿತು ಸುದ್ದಿಗಾರರು ಗಮನ ಸೆಳೆದಾಗ, “ಸಿದ್ದರಾಮಯ್ಯ ನಡೆಸುವುದು ಸತ್ಯ ಯಾತ್ರೆಯೋ ಸುಳ್ಳು ಯಾತ್ರೆಯೋ ಎಂಬುದನ್ನು ನಿರ್ಧರಿಸುವವರು ಜನರೇ ಹೊರತು ಕಾಂಗ್ರೆಸ್ ಪಕ್ಷವಲ್ಲ ಎಂದು ತಿವಿದರು.
(ಎನ್ಬಿಎನ್)