ಪ್ರಮುಖ ಸುದ್ದಿಮೈಸೂರು

ಮೈಸೂರಿಗೆ ಮತ್ತೊಮ್ಮೆ ಸ್ವಚ್ಛ ನಗರಿ ಪ್ರಶಸ್ತಿ ಸಿಗಬೇಕಾದರೆ ಸ್ವಚ್ಛತಾ ಆ್ಯಪ್ ಡೌನ್‌ಲೋಡ್ ಮಾಡಿ ಮಾಡಬೇಕಿದೆ ವೋಟ್

ಮೈಸೂರು,ಡಿ.12:-  ದೇಶದಲ್ಲೇ ಸ್ವಚ್ಛ ನಗರಿ ಎಂದು ಎರಡು ಬಾರಿ ಬಿರುದು ಪಡೆದು ಹ್ಯಾಟ್ರಿಕ್ ಗಳಿಸುವಲ್ಲಿ ವಿಫಲವಾಗಿರುವ ಮೈಸೂರಿಗೆ ಈ ಬಾರಿ ಮತ್ತೊಮ್ಮೆ ಸ್ವಚ್ಛ ನಗರಿ ಪ್ರಶಸ್ತಿ ಸಿಗಬೇಕಾದರೆ ನಗರದಲ್ಲಿ ವಾಸಿಸುವ ಪ್ರತಿಯೊಬ್ಬರೂ ಈ ಕೆಲಸ ಮಾಡಲೇಬೇಕು.

ಸಾಂಸ್ಕೃತಿಕ ನಗರಿ, ಪ್ಲಾಸ್ಟಿಕ್ ಮುಕ್ತ ನಗರಿ, ಅರಮನೆಗಳ ನಗರಿ ಎಂದು ಹಲವಾರು ಹೆಸರುಗಳು ನಮ್ಮ ಮೈಸೂರಿಗೆ ಸಿಕ್ಕಿರುವುದು ಹೆಮ್ಮೆಯ ವಿಷಯ. 2014-15 ಹಾಗೂ 2015-16ನೇ ಸಾಲಿನಲ್ಲಿ ಸತತ ಎರಡು ಬಾರಿ ದೇಶದಲ್ಲೇ ಸ್ವಚ್ಛ ನಗರಿ ಪ್ರಶಸ್ತಿ ಪಡೆದು ಹ್ಯಾಟ್ರಿಕ್ ಪ್ರಶಸ್ತಿಯ ಕನಸು ಕಾಣುವ ಸಮಯದಲ್ಲಿ 2016-17ನೇ ಸಾಲಿನಲ್ಲಿ ಮಧ್ಯ ಪ್ರದೇಶದ ಸೂರತ್ ನಗರ ಸ್ವಚ್ಛ ನಗರಿ ಬಿರುದು ಪಡೆದು ಹ್ಯಾಟ್ರಿಕ್ ಕನಸಿಗೆ ತಣ್ಣೀರೆರಚಿತು. ಇದರಿಂದ ಧೃತಿಗೆಡದ ಮೈಸೂರು ಮಹಾನಗರ ಪಾಲಿಕೆ ಈ ಬಾರಿ ಸ್ವಚ್ಛ ನಗರಿ ಬಿರುದು ಪಡೆಯಲೇಬೇಕೆಂದು ನಗರದಲ್ಲಿ ಸ್ಚಚ್ಛತೆಯ ಬಗ್ಗೆ ಹಲವಾರು ನೂತನ ನಿಯಮಗಳನ್ನ ಜಾರಿಗೆ ತಂದಿದೆ. ಅದಕ್ಕೆ ಈ ಬಾರಿ ಸ್ವಚ್ಛತಾ ಆ್ಯಪ್ ನಿರ್ಣಾಯಕ ಪಾತ್ರ ವಹಿಸಲಿದೆ. ಪಟ್ಟಕ್ಕಾಗಿ ಆ್ಯಪ್ ಡೌನ್‌ಲೋಡ್ ಮಾಡಲೇಬೇಕು

ಈ ಬಾರಿ ಮೈಸೂರಿಗೆ ಸ್ವಚ್ಛ ನಗರಿ ಪಟ್ಟ ಮತ್ತೆ ದೊರಕಬೇಕೆಂಬ ಅಭಿಮಾನವಿದ್ದರೆ ಮೊದಲು ಮೊಬೈಲ್‌ನಲ್ಲಿ ಸ್ವಚ್ಛತಾ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ಸಕ್ರಿಯರಾಗಿರಬೇಕು. ಸಾರ್ವಜನಿಕರು ಆ್ಯಪ್ ಡೌನ್‌ಲೋಡ್ ಮಾಡಿಕೊಂಡರೆ ಸರ್ವೇಕ್ಷಣೆಯಲ್ಲಿ ಕೇವಲ 100 ಅಂಕ ದೊರೆಯಲಿದೆ. ಅದೇ ಆ್ಯಪ್ ಬಳಕೆ ಮಾಡಿಕೊಂಡು ಆ್ಯಪ್ ಮೂಲಕ ದೂರು ನೀಡಿರಬೇಕು. ಇತರರ ದೂರಿಗೆ ಅಭಿಪ್ರಾಯ ಸೂಚಿಸಬೇಕು. ಸೇವೆಯ ಗುಣಮಟ್ಟದ ಬಗ್ಗೆ ಪ್ರತಿಕ್ರಿಯಿಸಬೇಕು. ದಿನಕ್ಕೆ ಒಟ್ಟು 5 ದೂರು ನೀಡಬಹುದು. ಇತರರ ದೂರಿಗೆ 5 ವೋಟ್ ಮಾಡಬಹುದಾಗಿದೆ. ದೂರು ನೀಡಿದ ನಂತರ ಪಾಲಿಕೆ ನೀಡಿದ ಸೇವೆಯ ಗುಣಮಟ್ಟದ ಬಗ್ಗೆ ದಿನಕ್ಕೆ 5 ಬಾರಿ ಅಭಿಪ್ರಾಯ ಸೂಚಿಸಬಹುದು. ಈ ರೀತಿ ಆ್ಯಪ್ ಮೂಲಕ ಸಾರ್ವಜನಿಕರು ಸಕ್ರಿಯರಾಗಿದ್ದರೆ 400 ಅಂಕಗಳು ದೊರೆಯಲಿವೆ.

ಮಹಾನಗರ ಪಾಲಿಕೆ ಹೊರ ತಂದಿರುವ ಸ್ವಚ್ಛತಾ ಆ್ಯಪ್‌ಅನ್ನು ಈಗಾಗಲೇ 20,600 ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದು, ಕೇವಲ 1,800 ಮಂದಿ ಸಕ್ರಿಯರಾಗಿ ಬಳಕೆ ಮಾಡುತ್ತಿದ್ದಾರೆ. ನಗರಕ್ಕೆ ಸ್ವಚ್ಛತೆ ಗರಿ ಪಡೆಯುವ ನಿಟ್ಟಿನಲ್ಲಿ ಇದೊಂದು ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದ್ದು, ಮೈಸೂರಿನ ಜನತೆ ಸ್ವಚ್ಛತಾ ಆ್ಯಪ್‌ಅನ್ನು ಸಕ್ರಿಯವಾಗಿ ಬಳಕೆ ಮಾಡಬೇಕಿದೆ. ಆಗ ಮಾತ್ರ 400 ಅಂಕಗಳು ದೊರೆತು ಮುಂದಿನ ತಿಂಗಳು ಜನವರಿಯಲ್ಲಿ ದೇಶಾದಾದ್ಯಂತ ನಡೆಯುವ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ನಮ್ಮ ಮೈಸೂರು ಸ್ವಚ್ಛತೆಯಲ್ಲಿ ಮೊದಲ ಸ್ಥಾನ ಪಡೆಯಲು ಸಾಧ್ಯವಾಗಲಿದೆ. ಇಲ್ಲವಾದಲ್ಲಿ ಕಳೆದ ಬಾರಿ 5ನೇ ಸ್ಥಾನಕ್ಕೆ ಕುಸಿದಿರುವ ಮೈಸೂರು ನಗರಕ್ಕೆ ಈ ಬಾರಿ ಆ ಸ್ಥಾನ ದೊರೆಯುವುದು ಕಷ್ಟವಾಗಲಿದೆ.

ಕಳೆದ ಮೂರೂವರೆ ವರ್ಷಗಳಿಂದ ದೇಶದಾದ್ಯಂತ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ ನಡೆಯುತ್ತಿದೆ. ಕಳೆದ ಬಾರಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಡುವ ಕಾರ್ಯ ಹಾಗೂ ಸ್ವಚ್ಛತಾ ಕಾರ್ಯದಲ್ಲಿ ಸಾರ್ವಜನಿಕರ ಸಹಭಾಗಿತ್ವ ವಿಷಯದಲ್ಲಿ ಹಿಂದೆ ಬಿದಿದ್ದರಿಂದ ಮೈಸೂರು ನಗರ 5ನೇ ಸ್ಥಾನಕ್ಕೆ ಕುಸಿದಿತ್ತು. ಇದೀಗ ಶೌಚಾಲಯಕ್ಕೆ ಸಂಬಂಧಿಸಿದ ಗುರಿ ಸಾಧಿಸಲಾಗಿದ್ದು, ಎಲ್ಲಾ ವಿಭಾಗಗಳಿಗಿಂತ ಸಾರ್ವಜನಿಕರ ಸ್ಪಂದನೆ, ಪ್ರತಿಕ್ರಿಯೆಗೆ ಹೆಚ್ಚು 1,400 ಅಂಕ ನಿಗದಿಪಡಿಸಲಾಗಿದೆ. ಆ್ಯಪ್ ಬಳಕೆಗೆ 400, ಸಾರ್ವಜನಿಕರು ಪ್ರಶ್ನೆಗಳಿಗೆ ಉತ್ತರಿಸುವ ವಿಭಾಗಕ್ಕೆ 1000 ಅಂಕ ನಿಗದಿಯಾಗಿದೆ. ಹೀಗಾಗಿ ಸಾರ್ವಜನಿಕರು ಸಕ್ರಿಯವಾಗಿ ಆ್ಯಪ್ ಬಳಸುವ ಸನ್ನಿವೇಶ ಸೃಷ್ಟಿಗಾಗಿ ಆ್ಯಪ್‌ನ ಸಕ್ರಿಯ ಬಳಕೆದಾರರಿಗೆ ನಗದು ಬಹುಮಾನ ನೀಡಲು ಪಾಲಿಕೆ ನಿರ್ಧರಿಸಿದೆ.

ಸ್ವಚ್ಛತಾ ಆ್ಯಪ್ ನಿರ್ಣಾಯಕ ಪಾತ್ರ

ದೇಶಾದ್ಯಂತ ನಗರಗಳ ಸ್ವಚ್ಛತಾ ಸರ್ವೇಕ್ಷಣೆಗೆ ನಾನಾ ನಿಯಮಾವಳಿಗಳನ್ನು ರೂಪಿಸಿ ಪ್ರತಿಯೊಂದಕ್ಕೂ ಅಂಕಗಳನ್ನು ನೀಡಲಾಗುತ್ತದೆ. ಅದರಂತೆ ಒಟ್ಟು 4000 ಅಂಕಗಳನ್ನು ವಿವಿಧ ವಿಭಾಗಗಳಲ್ಲಿ ವಿಂಗಡಿಸಲಾಗಿದ್ದು, ಈ ಪೈಕಿ 1400 ಅಂಕಗಳನ್ನು ಜನಾಭಿಪ್ರಾಯಕ್ಕೆ, ಆ್ಯಪ್ ಡೌನ್‌ಲೋಡ್‌ಗೆ 100 ಅಂಕ, ಆ್ಯಪ್ ಸಕ್ರಿಯ ಬಳಕೆಗೆ 400 ಅಂಕ, ಪ್ರಶ್ನೋತ್ತರಕ್ಕೆ 1000 ಅಂಕ ನಿಗದಿಪಡಿಸಲಾಗಿದೆ. ಹೆಚ್ಚು ಅಂಕ ಪಡೆದ ನಗರಕ್ಕೆ ಮೊದಲ ಸ್ಥಾನ ನೀಡಲಾಗುತ್ತದೆ. ಹಾಗಾಗಿ ನಗರದ ಜನತೆ ಸ್ವಚ್ಛತಾ ಆ್ಯಪ್‌ನಲ್ಲಿ ಸಕ್ರಿಯರಾಗಿ ಭಾಗವಹಿಸುವುದು ಮುಖ್ಯವಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: