ಮೈಸೂರು

ಕ್ರಾಂತಿಯನ್ನು ಹಿಂಸೆ ಎಂದುಕೊಳ್ಳಬೇಡಿ : ರಾಮಚಂದ್ರೇಗೌಡ

ಕ್ರಾಂತಿಯನ್ನು ಹಿಂಸೆ ಎಂದುಕೊಳ್ಳಬೇಕಿಲ್ಲ. ಅದು ಸಮಾಜಪರವಾದ ಹೋರಾಟ ಎಂದು ಜಾನಪದ ತಜ್ಞ ಪ್ರೊ.ಹಿ.ಶಿ.ರಾಮಚಂದ್ರೇಗೌಡ ಹೇಳಿದರು.

ಮೈಸೂರಿನ ಎಸ್ ಡಿಎಂ ಕಲ್ಯಾಣಮಂಟಪದಲ್ಲಿ ಸಮುದಾಯ ಕರ್ನಾಟಕ ಸಂಘಟನೆ ಏರ್ಪಡಿಸಿದ್ದ 6ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ರಾಮಚಂದ್ರೇಗೌಡ ಮಾತನಾಡಿದರು. ಮಂಟೇಸ್ವಾಮಿ, ಮಲೆಮಹದೇಶ್ವರ ಅವರಂತಹ ಜನಪದ ನಾಯಕರು ಶ್ರಮಿಕರ, ದಲಿತರ ಪರವಾಗಿ ಹೋರಾಟಗಳನ್ನು ಬಹು ಹಿಂದೆಯೇ ರಚಿಸಿದ್ದಾರೆ. ಇವರಿಬ್ಬರನ್ನು ಕುರಿತು ರಚಿತವಾಗಿರುವ ಜನಪದ ಮಹಾಕಾವ್ಯಗಳಲ್ಲಿ ಈ ಕ್ರಾಂತಿಯ ಲಕ್ಷಣಗಳು ಬಹು ಸ್ಪಷ್ಟವಾಗಿ ಕಾಣುತ್ತವೆ ಎಂದರು.

ಶ್ರಮಿಕರ ಕೈಯ್ಯಲ್ಲಿ ಆಯುಧಗಳನ್ನು ನೀಡಿ ಕ್ರಾಂತಿಗೀತೆಗಳನ್ನು ಇವರು ಹಾಡಿದ್ದಾರೆ. ಹಾರೆ, ಗುದ್ದಲಿ, ಕಬ್ಬಿಣ ಇವು ಸಹ ಕ್ರಾಂತಿಯ ಸಂಕೇತಗಳು. ಇವನ್ನೇ ಮಂಟೆಸ್ವಾಮಿ ಆಯುಧಗಳು ಎಂದಿದ್ದರು. ಬದುಕಲು ಪೂರಕವಾದ ಈ ಆಯುಧಗಳನ್ನು ಬಳಸಿಕೊಂಡು ಕೀಳರಿಮೆ ಬಿಟ್ಟು ಸ್ವಾಭಿಮಾನದಿಂದ ಬದುಕಿ ಎಂದು ತಿಳಿಸಿದ್ದರು ಎಂದು ಹೇಳಿದರು.

ಬಹುಸಂಖ್ಯಾತರ ಹಿತಾಸಕ್ತಿ ಕಾಯಲು ಸಮಾಜಪರವಾದ ಸಂಘಟನೆಗಳನ್ನು ಕಟ್ಟುವ ಪ್ರಯತ್ನ ಸದಾ ಇರಬೇಕು ಎಂದರು. ಕಾರ್ಯಕ್ರಮದಲ್ಲಿ ಸಮುದಾಯ ಕರ್ನಾಟಕದ ಅಧ್ಯಕ್ಷ ಪ್ರೊ.ಆರ್.ಕೆ.ಹುಡಗಿ, ರಂಗನಿರ್ದೇಶಕ ಪಿ.ಗಂಗಾಧರ ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

comments

Related Articles

error: