ಮೈಸೂರು

ರೈತರ, ದೇಶದ ಅಭಿವೃದ್ಧಿಗೆ ಸಹಕಾರ ಸಂಘಗಳ ಪಾತ್ರ ಹಿರಿದು: ಎಚ್.ವಿ. ರಾಜೀವ್

ರೈತರು ಹಾಗೂ ದೇಶದ ಅಭಿವೃದ್ಧಿಯಲ್ಲಿ ಸಹಕಾರ ಕ್ಷೇತ್ರ ಪ್ರಮುಖ ಪಾತ್ರವಹಿಸುತ್ತಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್‍ನ ಅಧ್ಯಕ್ಷ ಎಚ್.ವಿ. ರಾಜೀವ್ ಹೇಳಿದರು.

ರಾಜ್ಯ ಸಹಕಾರ ಮಹಾಮಂಡಲ, ಜಿಲ್ಲಾ ಸಹಕಾರ ಯೂನಿಯನ್‍ ವತಿಯಿಂದ ನಗರದಲ್ಲಿ ಸೋಮವಾರ ಆಯೋಜಿಸಿದ್ದ 63ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಸಹಕಾರಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ಸಹಕಾರ ಸಂಘಗಳಿದ್ದು, ರೈತರ ಹಾಗೂ ದೇಶದ ಅಭಿವೃದ್ಧಿಗೆ ಪ್ರಮುಖ ಪಾತ್ರವಹಿಸುತ್ತಿವೆ. ಇಂತಹ ಸಹಕಾರ ಸಂಸ್ಥೆಗಳಿಂದ ಹೈನುಗಾರಿಕೆ, ಕೃಷಿ, ವ್ಯಾಪಾರ ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ಆ ಮೂಲಕ ದೇಶದ ರೈತರು ಸುಸ್ಥಿರ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಗ್ರಾಮೀಣ ಭಾಗಗಳಲ್ಲಿ ಸಹಕಾರ ಕ್ಷೇತ್ರ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಗತಿ ಸಾಧಿಸಿದೆ. ಈ ನಿಟ್ಟಿನಲ್ಲಿ ಸರ್ಕಾರ ಸಹ ಸಹಕಾರ ಸಂಘ-ಸಂಸ್ಥೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಮಧ್ಯಮ ಮತ್ತು ಬಡ ಕುಟುಂಬಗಳ ಅಭಿವೃದ್ಧಿಗೂ ಸಹ ಸಹಕಾರ ಸಂಘ ಅತ್ಯವಶ್ಯಕವಾಗಿದೆ ಎಂದು ಹೇಳಿದರು.

ಉತ್ತಮ ಸಹಕಾರಿಗಳಿಗೆ ಸಹಕಾರ ಸಂಘಗಳ ಜಂಟಿ ನಿಬಂಧಕ ಎಚ್.ಸಿ. ಜೋಷಿ ಅವರನ್ನು ಸನ್ಮಾನಿಸಲಾಯಿತು.

ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್. ಚಂದ್ರಶೇಖರ್, ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಸದಾನಂದ, ಸಹಕಾರ ಸಂಘಗಳ ಉಪ ನಿಬಂಧಕ ಡಾ.ಜಿ. ಉಮೇಶ್, ರಾಜ್ಯ ಮೀನುಗಾರಿಕೆ ಸಹಕಾರ ಮಹಾ ಮಂಡಳದ ಅಧ್ಯಕ್ಷ ಎಸ್. ಮಾದೇಗೌಡ, ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳದ ಅಧ್ಯಕ್ಷ ಎಂ.ಕೃಷ್ಣಯ್ಯ, ಚನ್ನಬಸಪ್ಪ, ಎಸ್.ಚಂದ್ರಶೇಖರ್ ಮತ್ತು ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: