ಕರ್ನಾಟಕಪ್ರಮುಖ ಸುದ್ದಿ

ಕೆಂಪೇಗೌಡ ಏರ್‍ಪೋರ್ಟ್`ಗೆ ಮೆಟ್ರೋ ರೈಲು ವಿಸ್ತರಣೆ: ರಾಜ್ಯ ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು (ಡಿ.12): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವರೆಗೆ “ನಮ್ಮ ಮೆಟ್ರೋ” ರೈಲು ಸಂಪರ್ಕ ವಿಸ್ತರಿಸಲು ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ವಿಮಾನ ನಿಲ್ದಾಣಕ್ಕೆ ಮೆಟ್ರೋ ರೈಲು ಸಂಪರ್ಕಿಸುವ 5,950 ಕೋಟಿ ರೂ. ಪ್ರಸ್ತಾವನೆಯ ಯೋಜನೆಯನ್ನು ಸಂಪುಟದ ಮುಂದೆ ಇರಿಸಲಾಗಿತ್ತು. ನಮ್ಮ ಮೆಟ್ರೋ ಮೊದಲ ಹಂತದ ಕಾಮಗಾರಿ ಇನ್ನೂ ನಡೆಯುತ್ತಿದೆ. ಈ ಸಂದರ್ಭದಲ್ಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಮೆಟ್ರೋ ಸಂಪರ್ಕ ಕಲ್ಪಿಸುವಂತೆ ಸಾರ್ವಜನಿಕರಿಂದ ಬಹಳ ಬೇಡಿಕೆ ವ್ಯಕ್ತವಾಗಿತ್ತು.

ಜನರ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಕೇಂದ್ರ ಸರ್ಕಾರದ ನೆರವಿನ ಜೊತೆಗೆ ಕೆಐಎಎಲ್ ಸಹಭಾಗಿತ್ವ ಹಾಗೂ ಸಾಲ ಸೌಲಭ್ಯದೊಡನೆ ಈ ಯೋಜನೆಯನ್ನು ಕೈಗೆತ್ತಿಕೊಂಡು ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. 2021ಕ್ಕೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಇದೆ ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಅವರು ಸಂಪುಟ ಸಭೆಯ ನಂತರ ತಿಳಿಸಿದರು.

ನಾಗವಾರ ಜಂಕ್ಷನ್ ನಿಂದ ವಿಮಾನ ನಿಲ್ದಾಣಕ್ಕೆ ಮೆಟ್ರೋ ರೈಲು ಸಂಪರ್ಕಿಸುವ ಕಾಮಗಾರಿ ಆರಂಭಿಸಲಾಗುತ್ತಿದೆ. ಈ ಮಾರ್ಗದಲ್ಲಿ ಮೆಟ್ರೋ ಕಾರ್ಯಾಚರಣೆ ನಡೆಸುವ ಹೊತ್ತಿಗೆ 1.2 ಲಕ್ಷ ಮಂದಿ ಸಂಚರಿಸುವ ಅಂದಾಜು ಮಾಡಲಾಗಿದೆ. ಮೆಟ್ರೋವನ್ನು ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವುದರಿಂದ ಜನರಿಗೆ ತುಂಬಾ ಅನುಕೂಲವಾಗಲಿದೆ. ಹಾಗಾಗಿ ಈ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುವುದು ಸಚಿವರು ತಿಳಿಸಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ದೊರೆತರೆ ನಗರದ ಬಹುತೇಕ ಭಾಗಗಳಿಂದ ವಿಮಾನ ನಿಲ್ದಾಣಕ್ಕೆ ಸುಲಭ ಸಂಚಾರ ಸಾಧ್ಯವಾಗಲಿದೆ. ಎರಡನೇ ಹಂತದ ಮೆಟ್ರೋ ಯೋಜನೆಯ್ಲಿ 21.25 ಕಿ.ಮೀ ಉದ್ದದ ಗೊಟ್ಟಿಗೆರೆ-ನಾಗವಾರ ಮಾರ್ಗ ನಿರ್ಮಿಸಲಾಗುತ್ತದೆ. ಈ ಮಾರ್ಗಕ್ಕೆ ಈಗಾಗಲೇ ಟೆಂಡರ್ ಕರೆದಿದ್ದು ಕಾಮಗಾರಿಗೆ ಸಿದ್ಧತೆ ನಡೆದಿದೆ. ಈ ಮಾರ್ಗದಿಂದ ಒಂದು ತುದಿಯಲ್ಲಿ ಬರುವ ನಾಗವಾರದಿಂದ ವಿಮಾನ ನಿಲ್ದಾಣಕ್ಕೆ ಮಾರ್ಗ ನಿರ್ಮಾಣವಾಗಲಿದೆ. ಇಷ್ಟೂ ಮಾರ್ಗಗಳು ಸಿದ್ಧಗೊಂಡರೆ ನಗರದ ಬಹುತೇಕ ಭಾಗಗಳಿಂದ ವೇಗದ ಸಂಚಾರ ಸಾಧ್ಯವಾಗುತ್ತದೆ ಎಂದು ಸಚಿವ ಜಯಚಂದ್ರ ಮಾಹಿತಿ ನೀಡಿದ್ದಾರೆ.

(ಎನ್‍ಬಿಎನ್‍)

Leave a Reply

comments

Related Articles

error: