ಕರ್ನಾಟಕಪ್ರಮುಖ ಸುದ್ದಿ

ಕೋಮುಸೌಹಾರ್ದ ಕದಡುವ ಪೋಸ್ಟ್ ಹಾಕಿದರೆ ಕಠಿಣ ಕ್ರಮ: ಉ.ಕ. ಜಿಲ್ಲಾಧಿಕಾರಿ ಎಚ್ಚರಿಕೆ

ಶಿರಸಿ (ಡಿ.12): ಕೋಮುಸೌಹಾರ್ದ ಕದಡುವ ಪೋಸ್ಟ್ ಹಾಕಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಎಚ್ಚರಿಕೆ ನೀಡಿದ್ದಾರೆ.

ಗಲಭೆಗೆ ಹರಡಲು ಮುಖ್ಯಕಾರಣಗಳಲ್ಲಿ ಒಂದಾದ ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಕೋಮು ಗಲಭೆಗಳಿಗೆ ಪ್ರೇರೇಪಿಸುವ ಪೋಸ್ಟ್ ಪ್ರಕಟಿಸುವವರು ವಿರುದ್ಧ ಹಾಗೂ ಅದನ್ನು ಮೆಚ್ಚುವವರು (ಲೈಕ್ ಮಾಡುವವರು) ಹಂಚಿಕೊಳ್ಳುವವರ (ಶೇರ್ ಮಾಡುವವರ) ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದ್ದು ಅಗತ್ಯ ಕಂಡುಬಂದಲ್ಲಿ ತಕ್ಷಣ ಬಂಧಿಸುವಂತೆ ಆದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸತತ ಒಂದು ವಾರದಿಂದ ಕೋಮು ಗಲಭೆಯಿಂದ ನರಳುತ್ತಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸ್ಥಾಪನೆ ಮಾಡಲು ಜಿಲ್ಲಾಡಳಿತ ಮತ್ತು ಪೊಲೀಸರು ಹೆಣಗುತ್ತಿದ್ದು, ಇದೀಗ ಕೋಮು ಗಲಭೆ ಹರಡಲು ಪ್ರಮುಖ ಕಾರಣಗಳಲ್ಲೊಂದಾದ ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

ನಿನ್ನೆ ಕೋಮು ದ್ವೇಷ ಉಂಟು ಮಾಡುವ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಶಿಕ್ಷಕನೋರ್ವನನ್ನು ಈಗಾಗಲೇ ಪೊಲೀಸರು ಬಂಧಿಸಿರುವುದಾಗಿ ತಿಳಿಸಿರುವ ಜಿಲ್ಲಾಧಿಕಾರಿ ನಕುಲ್ ಅವರು, ಕೋಮುಸೌಹಾರ್ದಕ್ಕೆ ಹಾನಿಯಾಗುವ ಪೋಸ್ಟ್’ಗಳನ್ನು ಸಾಮಾಜಿಕ ಜಾಲತಾಣಗಳ ಗುಂಪುಗಳಲ್ಲಿ ಹಂಚಿಕೊಂಡಲ್ಲಿ ಅಂತಹಾ ಗುಂಪುಗಳ ಅಡ್ಮಿನ್‍ಗಳ ಮೇಲೆ ಕೇಸು ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅನುಮಾನಾಸ್ಪದವಾಗಿ ಸತ್ತಿರುವ ಪರೇಶ ಮೆಸ್ತಾನ ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಇನ್ನೂ ಬಂದಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ವರದಿಯ ಪರ ವಿರೋಧ ಚರ್ಚೆಗಳು ಆರಂಭವಾಗಿಬಿಟ್ಟಿವೆ. ಅಂತಿಮ ವರದಿ ಬರಲು ಇನ್ನೂ ಸಮಯ ಇದೆ. ಸಾವಿನ ಕಾರಣ ಇನ್ನೂ ತಿಳಿದುಬಂದಿಲ್ಲ, ಯಾರೂ ವದಂತಿಗಳಿಗೆ ಕಿವಿ ಕೊಡಬಾರದು ಎಂದು ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

(ಎನ್‍ಬಿಎನ್)

Leave a Reply

comments

Related Articles

error: