ಕರ್ನಾಟಕಮೈಸೂರು

ಉಚಿತ ಗ್ಯಾಸ್‍ ವಿತರಣೆ: ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ನಡುವೆ ಹೊಯ್ ಕೈ

ಬೈಲಕುಪ್ಪೆ: ಗ್ಯಾಸ್ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸದಸ್ಯರು ಶಾಸಕ ಕೆ.ವೆಂಕಟೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು. ಬೈಲಕುಪ್ಪೆ ತಾಪಂ ಸಭಾಂಗಣದಲ್ಲಿ ಅರಣ್ಯ ಇಲಾಖೆ ವತಿಯಿಂದ 2016-17 ನೇ ಸಾಲಿನ ಎಸ್.ಇ.ಪಿ. ಮತ್ತು ಟಿ.ಎಸ್.ಪಿ. ಯೋಜನೆಯಡಿ ಎಸ್.ಸಿ.ಮತ್ತು ಎಸ್.ಟಿ ಪಂಗಡದವರಿಗೆ ಉಚಿತವಾಗಿ ಗ್ಯಾಸ್‌ ಅನ್ನು ಶಾಸಕ ಕೆ.ವೆಂಕಟೇಶ್‌ರವರ ಅಧ್ಯಕ್ಷತೆಯಲ್ಲಿ  ವಿತರಿಸುವ ಸಮಾರಂಭದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಗಿತ್ತು.

ಶಾಸಕ ಕೆ.ವೆಂಕಟೇಶ್‌ರವರು ಕಾರ್ಯಕ್ರಮಕ್ಕೆ ಆಗಮಿಸುವ ವೇಳೆಗೆ ಜೆಡಿಎಸ್ ಜಿಪಂ ಸದಸ್ಯರಾದ ಕೆ.ಎಸ್. ಮಂಜುನಾಥ್, ರುದ್ರಮ್ಮ ನಾಗಯ್ಯ, ಕೆ.ಸಿ.ಜಯಕುಮಾರ್, ರಾಜೇಂದ್ರ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ರಾಮು ಐಲಾಪುರ ಮತ್ತು ತಾಪಂ ಸದಸ್ಯರು ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಆರ್‍ಎಫ್‍ಒ ಗಿರೀಶ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ರಾಮು ಐಲಾಪುರ ಮಾತನಾಡಿ, ಆರ್‍ಎಫ್‍ಒ ಗಿರೀಶ್‌ರವರು ಕಾಂಗ್ರೆಸ್ ಪಕ್ಷದ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ ಜಿಪಂ, ತಾಪಂ ಸದಸ್ಯರಿಗೆ ಗ್ಯಾಸ್ ವಿತರಣೆ ಸಮಾರಂಭಕ್ಕೆ ಆಹ್ವಾನಿಸದೆ ಕೇವಲ ಕಾಂಗ್ರೆಸ್‌ನ ಜಿಪಂ, ತಾಪಂ ಸದಸ್ಯರಿಗೆ ಆಹ್ವಾನಿಸಿದ್ದಾರೆ. ಇವರು ಸರ್ವಾಧಿಕಾರಿ ಧೋರಣೆ ನಡೆಸುತ್ತಿದ್ದಾರೆ. ಇವರು ನಿಜವಾದ ಫಲಾನುಭವಿಗಳನ್ನು ಆಯ್ಕೆ ಮಾಡದೆ ಕೇವಲ ಕಾಂಗ್ರೆಸ್ ಕಾರ್ಯಕರ್ತರನ್ನು ಆಯ್ಕೆ ಮಾಡಿದ್ದಾರೆ ಮತ್ತು ಸರ್ಕಾರಿ ಕಾರ್ಯಕ್ರಮಕ್ಕೆ ಜೆಡಿಎಸ್ ಸದಸ್ಯರನ್ನು ಅಹ್ವಾನಿಸದೆ ಅವಮಾನ ಮಾಡಿದ್ದಾರೆ ಎಂದು ಸಭೆಯಲ್ಲಿ ಗಲಾಟೆ ಮಾಡಿದರು.

ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಸದಸ್ಯರು ಮತ್ತು ಶಾಸಕರ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಇದನ್ನು ಗ್ಯಾಸ್ ಪಡೆಯಲು ಬಂದಿದ್ದ ಫಲಾನುಭವಿಗಳು ಇಲ್ಲಿ ಗಲಾಟೆ ನಡೆಯುತ್ತಿದೆ. ಪೊಲೀಸರು ಬಂದಿದ್ದಾರೆ ಲಾಠಿ ಚಾರ್ಜ್‌ ಮಾಡುತ್ತಾರೆ ಎಂದು ಹೆಂಗಸರು ಮತ್ತು ಮಕ್ಕಳು ಆ ನೂಕು ನುಗ್ಗಲಿನಲ್ಲಿಯೆ ಹೊರನಡೆದರು. ತಕ್ಷಣ ಎಸ್‍ಐ ಮುದ್ದುಮಹದೇವ ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಶಾಸಕ ಕೆ.ವೆಂಕಟೇಶ್‌ಅವರು ಮಧ್ಯೆ ಪ್ರವೇಶಿಸಿ ಜೆಡಿಎಸ್ ತಾಪಂ, ಜಿಪಂ ಸದಸ್ಯರು ನ್ಯಾಯ ರೀತಿಯಲ್ಲಿ ನಮ್ಮ ಕ್ಷೇತ್ರದಲ್ಲೂ ಫಲಾನುಭವಿಗಳಿದ್ದಾರೆ. ನಮಗೂ ಗ್ಯಾಸ್ ನೀಡಿ ಎಂದು ಗೌರವಯುತವಾಗಿ ಕೇಳಬೇಕಿತ್ತು ಮತ್ತು ಪಟ್ಟಿ ಕೊಡಬೇಕಿತ್ತು. ಇದನ್ನು ಬಿಟ್ಟು ಬಡವರಿಗೆ ನೀಡುತ್ತಿರುವ ಗ್ಯಾಸ್ ತಡೆಯಲು ಬಂದಿರುವುದು ಸರಿಯಲ್ಲ. ಅವರು ಕೂಡ ಪಟ್ಟಿ ನೀಡಲಿ, ಅವರು ಕೊಟ್ಟ ಫಲಾನುಭವಿಗಳಿಗೆ ಗ್ಯಾಸ್ ವಿತರಿಸಲಾಗುವುದು ಎಂದು ಸಮಜಾಯಿಷಿ ನೀಡಿದರು. ಆಗ ಈ ದಿನ ನೀವು ಕೊಡುತ್ತಿರುವ ಗ್ಯಾಸ್ ಅನ್ನು ನಿಲ್ಲಿಸಿ ನಾವು ಕೊಡುವ ಪಟ್ಟಿಯನ್ನು ಸೇರಿಸಿ ಗ್ಯಾಸ್ ವಿತರಿಸಿ ಎಂದು ಕೇಳಿದಾಗ ಈಗಾಗಲೇ 1050 ಜನರ ಪಟ್ಟಿ ತಯಾರಿಸಲಾಗಿದೆ. ಯಾವುದೇ ಕಾರಣಕ್ಕೂ ಪಟ್ಟಿ ಬದಲಾಯಿಸುವುದಿಲ್ಲ ಎಂದಾಗ ಜೆಡಿಎಸ್, ಜಿಪಂ, ತಾಪಂ ಸದಸ್ಯರು ಕಾರ್ಯಕ್ರಮದಿಂದ ಹೊರ ನಡೆದರು. ನಂತರ ಶಾಸಕರು ಫಲಾನುಭವಿಗಳಿಗೆ ಭಾರತ್‌ ಗ್ಯಾಸ್ ವಿತರಿಸಿದರು.

Leave a Reply

comments

Related Articles

error: