ಕರ್ನಾಟಕಮೈಸೂರು

ತಮಿಳುನಾಡಿಗೆ ನೀರು ಬಿಟ್ಟಿರುವುದಕ್ಕೆ ವಿರೋಧ: ರೈತರಿಂದ ಕಬಿನಿ ಜಲಾಶಯಕ್ಕೆ ಮುತ್ತಿಗೆ

ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕೆಂದು ಸುಪ್ರೀಂಕೋರ್ಟ್ ನೀಡಿರುವ ಸೂಚನೆ ವಿರೋಧಿಸಿ ಹಾಗೂ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮಂಡ್ಯದಲ್ಲಿ  ರೈತರ ಆಕ್ರೋಶ ಭುಗಿಲೆದ್ದಿದ್ದು ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಕಬಿನಿ ಜಲಾಶಯಕ್ಕೆ ಮುತ್ತಿಗೆ ಹಾಕಲು ತೆರಳಿದ್ದ ರೈತ ಸಂಘದ ಮುಖಂಡ ಕುರುಬೂರು ಶಾಂತಕುಮಾರ್ ಹಾಗೂ ಬಡಗಲಪುರ ನಾಗೇಂದ್ರ ಅವರನ್ನು ಪೊಲೀಸರು ಬಂಧಿಸಿದ್ದಾರೆ.

10 ದಿನಗಳಲ್ಲಿ 15 ಟಿಎಂಸಿ ನೀರು ಬಿಡುವಂತೆ  ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಸುಪ್ರೀಂಕೋರ್ಟ್ ಆದೇಶವನ್ನು ವಿರೋಧಿಸಿ ರೈತ ಮುಖಂಡರು, ವಿವಿಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

ಮಂಡ್ಯದ ಸಂಜಯ ವೃತ್ತದ ಬಳಿ ಪ್ರತಿಭಟನೆ ಹಿಂಸೆಗೆ ತಿರುಗಿದ್ದು, ಸರ್ಕಾರಿ ಆಸ್ತಿಗಳಿಗೆ ಹಾನಿಯುಂಟು ಮಾಡಲಾಗಿದೆ. ಜಿಲ್ಲೆಯ ವಿವಿಧೆಡೆ ಸುದೀಪ್ ಅಭಿನಯದ ಕೋಟಿಗೊಬ್ಬ 2 ಚಿತ್ರದ ಪೋಸ್ಟರ್ ಗಳನ್ನು ಹರಿದುಹಾಕಲಾಗಿದ್ದು, ಟೈಯರ್ ಗಳಿಗೆ ಬೆಂಕಿ ಹಚ್ಚಲಾಗಿದೆ.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ಪುಟ್ಟಣ್ಣಯ್ಯ ನೇತ್ರತ್ವದಲ್ಲಿ ಕೆಆರ್ ಎಸ್ ಪ್ರವೇಶದ್ವಾರದ ಬಳಿ ಕೆಲವು ರೈತರು ಧರಣಿ ನಡೆಸಿದರು. ಕಬಿನಿ ಜಲಾಶಯಕ್ಕೆ  ಮುತ್ತಿಗೆ ಹಾಕಲು ತೆರಳಿದ ರೈತರನ್ನು ಪೊಲೀಸರು  ಬಂಧಿಸಿದ್ದಾರೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಪುಟ್ಟಣ್ಣಯ್ಯ ಮಾತನಾಡಿ ಸುಪ್ರೀಂಕೋರ್ಟ್ ಆದೇಶ ನ್ಯಾಯವಾದದ್ದಲ್ಲ. ನಮ್ಮ ರಾಜ್ಯ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ಇಂಥ ಸ್ಥಿತಿಯಲ್ಲಿ ತಮಿಳುನಾಡಿಗೆ ಹೇಗೆ ನೀರನ್ನು ಬಿಡುತ್ತಿದ್ದಾರೆ. ರೈತರ ಬೇಳೆಗೂ ನೀರಿಲ್ಲದಾಗಿದೆ. ಜಾನುವಾರುಗಳಿಗೂ ನೀರಿಲ್ಲ. ರಾಜ್ಯ ಸರ್ಕಾರ ಇಲ್ಲಿನ ಜನರನ್ನು ಯಾವುದೇ ಪರಿಸ್ಥಿತಿಯಲ್ಲೂ ಕಾಪಾಡಬೇಕಿದೆ ಎಂದರು.

ಕಾನೂನು ಸುವ್ಯವಸ್ಥೆ ಕಾಪಾಡಲು ಬೆಂಗಳೂರು ಸೇರಿದಂತೆ ಪ್ರತಿ ಜಿಲ್ಲೆಯಲ್ಲಿಯೂ ಹೈ ಅಲರ್ಟ್ ಘೋಷಿಸಲಾಗಿದೆ. ಮಂಡ್ಯದಲ್ಲಿ ಶಾಲಾ-ಕಾಲೇಜುಗಳಿಗೆ ಇನ್ನೂ ಎರಡು ದಿನಗಳ ಕಾಲ ರಜೆ ಘೋಷಿಸಲಾಗಿದೆ.

ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ನಡೆಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಆದೇಶದ ವಿರುದ್ದ ಹೋಗಲು ಸಾಧ್ಯವಿಲ್ಲ. ಅದರಂತೆ ರೈತರ ಅಭಿವೃದ್ಧಿಗಾಗಿಯೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕಳೆದ ಬಾರಿಯೂ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ನೀರಿನ ಬರ ಕಂಡು ಬಂದಿತ್ತು. ಈ ಬಾರಿಯೂ ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ

ಮುಂಗಾರು ಮಳೆ ಸರಿಯಾಗಿ ಬಿದ್ದಿಲ್ಲ.  ಕರ್ನಾಟಕದಲ್ಲಿ ಫಸಲು ಬೇಳೆಯಲು ಮತ್ತು ಕುಡಿಯಲೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

Leave a Reply

comments

Related Articles

error: