ದೇಶ

ಮಂಗಳವಾರದಿಂದ ಕೆಲ ಎಟಿಎಂಗಳಲ್ಲಿ 2000 ರು. ನೋಟು ಲಭ್ಯ

ಹೊಸ ವಿನ್ಯಾಸದ 500 ಮತ್ತು 2000 ರು. ಮುಖಬೆಲೆಯ ನೋಟುಗಳ ವಿತರಣೆಗಾಗಿ ಎಟಿಎಂಗಳನ್ನು ಸರಿಹೊಂದಿಸುವ ಕೆಲಸ ಭರದಿಂದ ಸಾಗಿದ್ದು, ಸಾಫ್ಟ್‍ವೇರ್-ಹಾರ್ಡ್‍ವೇರ್‍ನಲ್ಲಿ ಮಾರ್ಪಾಡಾದ ಎಟಿಎಂಗಳಲ್ಲಿ ಮಂಗಳವಾರದಿಂದಲೇ 2000 ರು. ನೋಟುಗಳು ಲಭ್ಯವಾಗಲಿದೆ.

ಎಟಿಎಂಗಳಲ್ಲಿ 500, 2000 ರು. ನೋಟುಗಳು ಗ್ರಾಹಕರಿಗೆ ಆದಷ್ಟು ಶೀಘ್ರ ಲಭ್ಯವಾಗುವಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಭಾರತೀಯ ರಿಸರ್ವ್ ಬ್ಯಾಂಕ್ ಉಪ ಗವರ್ನರ್ ಎಸ್.ಎಸ್. ಮುಂದ್ರಾ ನೇತೃತ್ವದಲ್ಲಿ ಕಾರ್ಯಪಡೆಯೊಂದನ್ನು ರಚಿಸಿದೆ. ಬ್ಯಾಂಕುಗಳು ಹಾಗೂ ವಿವಿಧ ಸಂಸ್ಥೆಗಳ ಜತೆಗೂಡಿ ಹೊಸ ನೋಟುಗಳು ಎಟಿಎಂಗಳಲ್ಲಿ ಬೇಗನೆ ಸಿಗಲು ಈ ತಂಡ ಪ್ರಯತ್ನಿಸಲಿದೆ.

ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯುನ್ನತ ಮಟ್ಟದ ಸಭೆ ನಡೆಸಿ, ನೋಟು ನಿಷೇಧದ ಬಳಿಕ ಎದುರಾಗಿರುವ ಸಮಸ್ಯೆಗಳು ಹಾಗೂ ಪ್ರಗತಿ ಕುರಿತಂತೆ ಚರ್ಚಿಸಿದರು. ಕಳೆದ 3 ತಿಂಗಳಿಂದ ಚಲಾವಣೆಯಲ್ಲಿರುವ ಕರೆಂಟ್ ಅಕೌಂಟ್‍ದಾರರು, ಸಣ್ಣ ಉದ್ದಿಮೆದಾರರು ಬ್ಯಾಂಕಿನಿಂದ ಒಂದು ವಾರಕ್ಕೆ 50 ಸಾವಿರ ರು.ವರೆಗೂ ಹಣ ಹಿಂಪಡೆಯಲು ಅವಕಾಶ ನೀಡುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು.

ಹಣ ಪಡೆಯಲು ಬ್ಯಾಂಕುಗಳು ಹಾಗೂ ಎಟಿಎಂಗಳ ಮುಂದೆ ದೇಶಾದ್ಯಂತ ಜನರು ಸಾಲುಗಟ್ಟಿ ನಿಂತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮೈಕ್ರೋ ಎಟಿಎಂಗಳನ್ನು ನಿಯೋಜಿಸಲು ಸಭೆಯಲ್ಲಿ ಉದ್ದೇಶಿಸಲಾಗಿದೆ.

Leave a Reply

comments

Related Articles

error: