ಕರ್ನಾಟಕ

ಎಚ್‍ಐವಿ/ಏಡ್ಸ್ ಬಗ್ಗೆ ಜಾಗೃತಿ ಅಗತ್ಯ : ಡಾ.ಶಿವಕುಮಾರ್

ಮಡಿಕೇರಿ,ಡಿ.14: ಆರೋಗ್ಯಯುತ ಬದುಕು ನಡೆಸುವಂತಾಗಲು ಎಚ್.ಐ.ವಿಯಂತಹ ಸೋಂಕಿನ ಬಗ್ಗೆ ಪ್ರತಿಯೊಬ್ಬರಲ್ಲೂ ತಿಳುವಳಿಕೆ ಮತ್ತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಗಳಾದ ಡಾ. ಶಿವಕುಮಾರ್ ಅವರು ತಿಳಿಸಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಲಯನ್ಸ್ ಮತ್ತು ಲಯನೆಸ್ ಸಂಸ್ಥೆ, ರೋಟರಿ ಮಿಸ್ಟಿಹಿಲ್ಸ್, ಓಡಿಪಿ-ಸ್ನೇಹಾಶ್ರಯ ಸಮಿತಿ ಹಾಗೂ ಸರ್ವೋದಯ ಎಚ್‍ಐವಿ ಬಾಧಿತರ ಸಂಪರ್ಕ ಜಾಲ, ಆಶೋದಯ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಬುಧವಾರ ನಡೆದ ವಿಶ್ವ ಏಡ್ಸ್ ನಿಯಂತ್ರಣಾ ದಿನಾಚರಣೆಯ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,  ಅಕ್ವೇರಡ್ ಇಮ್ಯೂನೊ ಡಿಫೆನ್ಸಿ ಸಿಂಡ್ರೋಮ್ ಮಾನವನ ಆರೋಗ್ಯವನ್ನು ಕುಂದಿಸುತ್ತದೆ. ಎಚ್.ಐ.ವಿ ಸೋಂಕಿತ ವ್ಯಕ್ತಿಯನ್ನು ಆ್ಯಂಟಿ ಬಯೋಟಿಕ್ ಔಷಧಿಯಿಂದ ಹೆಚ್ಚು ಕಾಲ ಬದುಕಿಸಬಹುದು. ಆದರೆ ರೋಗದಿಂದ ಗುಣಮುಖರಾಗುವುದಿಲ್ಲ. ಇವರಿಗೆ ಪೌಷ್ಠಿಕ ಆಹಾರ ಬಹಳ ಮುಖ್ಯ ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಎ.ಸಿ.ಶಿವಕುಮಾರ್ ತಿಳಿಸಿದರು.

ಲಯನ್ಸ್ ಕ್ಲಬ್ ಅಧ್ಯಕ್ಷರಾದ ಕನ್ನಂಡ ಬೊಳ್ಳಪ್ಪ ಮಾತನಾಡಿ ಪ್ರಪಂಚದ ಎಲ್ಲಾ ಮಾನವರು ಒಂದಲ್ಲ ಒಂದು ರೋಗದಲ್ಲಿ ಬಳಲುತ್ತಿದ್ದಾರೆ. ಆದರೆ ಏಡ್ಸ್ ಮಾನವ ಪ್ರಪಂಚಕ್ಕೆ ಮಾರಕವಾಗಿದ್ದು, ಎಚ್ಚರಿಕೆ ವಹಿಸಬೇಕು.  ರೋಗಬಾಧಿತ ವ್ಯಕ್ತಿಗಳು ರೋಗ ಹರಡದಂತೆ ನೋಡಿಕೊಳ್ಳಬೇಕು. ಹುಟ್ಟಿದವನು ಸಾಯಲೇ ಬೇಕು. ಅದರೆ ಅಮೂಲ್ಯವಾದ ಜೀವನವನ್ನು ರಕ್ಷಣೆ ಮಾಡಿಕೊಳ್ಳಿ ಎಂದು ಹೇಳಿದರು.

ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ನೀಲೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಎಂ.ಶಿವಕುಮಾರ್, ಸಮುದಾಯ ಆರೋಗ್ಯ ಮುಖ್ಯಸ್ಥರಾದ ಡಾ.ರಾಮಚಂದ್ರ ಕಾಮತ್, ಜಿಲ್ಲಾ ಕಾರ್ಯಕ್ರಮ ಸಹಾಯಕರು ಹಾಗೂ ಏಡ್ಸ್ ನಿಯಂತ್ರಣ ಘಟಕದ ಕಮಲ, ಜಿಲ್ಲಾ ಮೇಲ್ವಿಚಾರಕರಾದ ಸುನೀತ ಮುತ್ತಣ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಮ್ತಾಜ್, ಲಯನ್ಸ್ ಕ್ಲಬ್‍ನ ಅಧ್ಯಕ್ಷರಾದ ಕನ್ನಂಡ ಕವಿತಾ ಬೊಳ್ಳಪ್ಪ, ವಕೀಲರ ಸಂಘದ ಅಧ್ಯಕ್ಷರಾದ ಸಿ.ಟಿ.ಜೋಸೆಫ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಬಿ.ಎಸ್.ಜಯಪ್ಪ, ವಿದ್ಯಾರ್ಥಿಗಳು ಹಾಜರಿದ್ದರು. ( ವರದಿ: ಕೆ.ಸಿ.ಐ, ಪಿ.ಎಸ್ )

Leave a Reply

comments

Related Articles

error: