ದೇಶಪ್ರಮುಖ ಸುದ್ದಿ

ಭಾರತ ಏಕೀಕರಣಗೊಳಿಸಿದ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ 67ನೇ ಪುಣ್ಯಸ್ಮರಣೆ

ನವದೆಹಲಿ (ಡಿ.15): ಭಾರತವನ್ನು ಬಿಟ್ಟು ಬ್ರಿಟಿಷರು ಹೊರನಡೆದಾಗ ಸುಮಾರ 500 ಕ್ಕೂ ಹೆಚ್ಚು ಆಡಳಿತಕ್ಕೆ ಒಳಪಟ್ಟಿದ್ದ ದೇಶವನ್ನು ತಮ್ಮ ಚಾಣಾಕ್ಷತೆಯಿಂದ ಒಗ್ಗೂಡಿಸಿದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 67ನೇ ಪುಣ್ಯತಿಥಿ ಕಾರ್ಯಕ್ರಮವನ್ನು ಇಂದು ದೇಶದ ವಿವಿಧೆಡೆ ಆಚರಿಸಲಾಗುತ್ತಿದೆ.

ಇಂದು ಗುಜರಾತ್ ಸೇರಿದಂತೆ ದೇಶದ ವಿವಿಧೆಡೆ ಶ್ರದ್ಧಾಂಜಲಿ ಸಮರ್ಪಿಸಿ ರಾಷ್ಟ್ರನಾಯಕನ ಕೊಡುಗೆಯನ್ನು ಸ್ಮರಿಸಲಾಗುತ್ತಿದೆ.

ಉಕ್ಕಿನ ಮನುಷ್ಯ ಎಂದೇ ಚಿರಪರಿಚಿತರಾಗಿದ್ದ ಪಟೇಲರು 31ನೇ ಅಕ್ಟೋಬರ್ 1875ರಲ್ಲಿ ಜನಿಸಿದರು. ಗುಜರಾತ್‍ನಲ್ಲಿ ವಕೀಲರಾಗಿದ್ದ ಇವರು ದೇಶದ ಸ್ವಾತಂತ್ರ್ಯ ಚಳವಳಿಯತ್ತ ಆಕರ್ಷಿತರಾಗಿ ಹೋರಾಟಕ್ಕೆ ಧುಮುಕಿದರು. ತಮ್ಮ ರಾಜ್ಯದ ಖೇಡಾ, ಬೊರ್ಸಾದ್ ಮತ್ತು ಬಾರ್ದೋಲಿಯಲ್ಲಿ ರೈತರನ್ನು ದೊಡ್ಡ ಮಟ್ಟದಲ್ಲಿ ಸಂಘಟಿಸಿದ್ದ ಪಟೇಲರು ಬ್ರಿಟಿಷ್ ರಾಜ್ ವಿರುದ್ಧ ಅಹಿಂಸಾತ್ಮಕ ಅಸಹಕಾರ ಚಳವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು.

ಗುಜರಾತ್‍ನ ಅತ್ಯಂತ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ ಪಟೇಲರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಮುಖ್ಯಸ್ಥರಾದರು. ಕ್ವಿಟ್ ಇಂಡಿಯಾ ಚಳವಳಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.

ಸ್ವಾತಂತ್ರ ಬಂದ ನಂತರ, ಹರಿದು ಹಂಚಿಹೋಗಿದ್ದ ಭಾರತವನ್ನು ಒಗ್ಗೂಡಿಸಿದ ಖ್ಯಾತಿ ಇವರದು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಎಲ್ಲ ಪ್ರಾಂತ್ಯಗಳನ್ನು ಒಂದು ಒಕ್ಕೂಟದ ವ್ಯವಸ್ಥೆಗೆ ತಂದ ಇವರನ್ನು ಭಾರತದ ಏಕೀಕರಣ ಶಿಲ್ಪಿ ಎಂದೇ ಕರೆಯಲಾಗುತ್ತದೆ. ಆಗಿನ ಸನ್ನಿವೇಶದಲ್ಲಿ ಭಾರತವನ್ನು ಏಕೀಕರಣಗೊಳಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ.

ರಾಜರ ಆಳ್ವಿಕೆ ಇದ್ದ ಪ್ರದೇಶಗಳಲ್ಲಿ ಪಟೇಲರ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತವಾಯಿತು. ಕಾಶ್ಮೀರ, ಹೈದರಾಬಾದ್‍ ಸಂಸ್ಥಾನಲ್ಲಿ ಪ್ರತ್ಯೇಕತೆಯ ಕೂಗು ಆಗಲೇ ಜೋರಾಗಿತ್ತು. ಈ ವಿಷಯದಲ್ಲಿ ಕಠಿಣ ನಿರ್ಧಾರಗಳನ್ನು ಕೈಗೊಂಡ ಪಟೇಲರು ಭಾರತವನ್ನು ಒಗ್ಗೂಡಿಸಿ ಉಕ್ಕಿನ ಮನುಷ್ಯ ಎಂಬ ಬಿರುದು ಸಹ ಗಳಿಸಿದ್ದರು.

ಸ್ವತಂತ್ರ್ಯ ಭಾರತದ ಪ್ರಥಮ ಗೃಹ ಸಚಿವ ಮತ್ತು ಉಪ ಪ್ರಧಾನಮಂತ್ರಿಯಾಗಿದ್ದ ಪಟೇಲರು ಅನೇಕ ಪ್ರಗತಿಪರ ಕಾರ್ಯಗಳನ್ನು ಅನುಷ್ಠಾನಗೊಳಿಸಿ ದೇಶಾಭಿವೃದ್ದಿಗೆ ಶ್ರಮಿಸಿದ್ದರು. ಪಂಜಾಬ್ ಮತ್ತು ದೆಹಲಿಯ ಸಹಸ್ರಾರು ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಿದ್ದು ಪಟೇಲ್ ಅವರ ಸಮರ್ಥ ಆಡಳಿತಕ್ಕೆ ಸಾಕ್ಷಿ. ಡಿಸೆಂಬರ್ 15, 1950ರಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲರು ನಿಧನರಾದರು.

ಪಟೇಲ್ ಅವರ 67ನೇ ಪುಣ್ಯಸ್ಮರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಶ್ರದ್ಧಾಂಜಲಿ ಸಮರ್ಪಿಸಿದ್ದಾರೆ.

(ಎನ್‍ಬಿಎನ್‍)

Leave a Reply

comments

Related Articles

error: