
ಮೈಸೂರು, ಡಿ. 15 : ಭಾರತೀಯ ಸಾಂಸ್ಕೃತಿಕ ವಿಕಾಸ ವೇದಿಕೆಯು ಮುಂಬರುವ ಫೆಬ್ರವರಿ ತಿಂಗಳಿನಲ್ಲಿ ಆಯೋಜಸಿರುವ ಸಾರ್ಥಕ ಸಾಧನಾ ಸಮಾವೇಶದ ಸರ್ವಾಧ್ಯಕ್ಷರಾಗಿ ನಾಡೋಜ ಡಾ.ಮಹೇಶ್ ಜೋಶಿಯವರನ್ನು ಆಯ್ಕೆ ಮಾಡಲಾಗಿದೆ ಎಂದು ವೇದಿಕೆ ಅಧ್ಯಕ್ಷ ತಗಡೂರು ರವಿಶಂಕರ್ ತಿಳಿಸಿದರು.
ತ್ರಿವಿಧ ದಾಸೋಹಿ ಡಾ.ಶಿವಕುಮಾರಸ್ವಾಮಿ ಸಾಧನೆ ಸಿದ್ಧಿಯ ಬಗ್ಗೆ, ಸ್ವಾತಂತ್ರಸೇನಾನಿ ತಗಡೂರು ಸುಬ್ಬಣ್ಣ ಸಂಸ್ಮರಣೆ, ಮ.ರಾಮಮೂರ್ತಿಯವರ ನೆನಪು ಸಮಾರಂಭವನ್ನು 2018ರ ಫೆಬ್ರವರಿಯ 25 ಮತ್ತು 26ರಂದು ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಲಾಗಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಜೋಶಿಯವರು ದೂರದರ್ಶನ ಕೇಂದ್ರದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಿ, ಚಂದನ ವಾಹಿನಿಯಲ್ಲಿ ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ನೀಡುವ ಮೂಲಕ ವಾಹಿನಿಯನ್ನು ಮೇಲ್ಮಟ್ಟಕ್ಕೆ ಬೆಳೆಸಿದ್ದಾರೆ, ಮಾಧ್ಯಮ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿ ಕಳೆದ ಜೂನ್ ನಲ್ಲಿ ನಿವೃತ್ತರಾಗಿದ್ದು ಇವರ ಕನ್ನಡ ಸೇವೆಯನ್ನು ಮನಗಂಡು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಇವರಿಗೆ ರಾಜ್ಯ ಸರ್ಕಾರದ ರಾಜ್ಯೋತ್ಸವ ಸೇರಿದಂತೆ ಹಲವಾರು ಪ್ರಶಸ್ತಿಗಳ ಗೌರವಕ್ಕೆ ಪಾತ್ರರಾಗಿದ್ದು ಇವರನ್ನು ಆಯ್ಕೆ ಮಾಡಿರುವುದು ಹೆಮ್ಮೆಯೆನಿಸಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ರವಿಶಂಕರ್ ಉಚ್ಚರಿಸಿದರು.
ಸಮ್ಮೇಳನದ ರೂಪುರೇಷಗಳ ಬಗ್ಗೆ ಸ್ವಾಗತ ಸಮಿತಿಯ ದೇವಪ್ಪ ನಾಯಕ ಮತ್ತು ಗೀತಾ ಗಣೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಜೀವ್ ಕುಮಾರ್, ನಾಗಮಣಿ ಇದ್ದರು. (ವರದಿ : ಕೆ.ಎಂ.ಆರ್)