
ಮೈಸೂರು
ಸಚಿವ ಸೇಠ್ ಬೆಂಬಲಿಸಿ ಮೈಸೂರಿನಲ್ಲಿ ಬೈಕ್ ರ್ಯಾಲಿ
ಅಶ್ಲೀಲ ಚಿತ್ರ ವೀಕ್ಷಿಸಿದ ಆರೋಪ ಎದುರಿಸಿದ ಆರೋಪ ಎದುರಿಸುತ್ತಿರುವ ಸಚಿವ ತನ್ವೀರ್ ಸೇಠ್ ಅವರನ್ನು ಬೆಂಬಲಿಸುವ ನಿಟ್ಟಿನಲ್ಲಿ ನೂರಕ್ಕೂ ಹೆಚ್ಚು ಬೈಕ್ ಸವಾರರು ಮಂಗಳವಾರದಂದು ಬೈಕ್ ರ್ಯಾಲಿ ನಡೆಸಿದರು.
ತನ್ವೀರ್ ಸೇಠ್ ಅಭಿಮಾನಿಗಳ ಸಂಘ ಮತ್ತು ತನ್ವೀರ್ ಸೇಠ್ ವೆಲ್ಫೇರ್ ಫೌಂಡೇಶನ್ ಉದಯಗಿರಿಯ ಬಿ.ಡಿ. ಕಾಲೋನಿಯಿಂದ ಈ ಬೈಕ್ ರ್ಯಾಲಿಯನ್ನು ಆಯೋಜಿಸಿತ್ತು. ವಿಪಕ್ಷದವರು ಸೇಠ್ ಅವರನ್ನು ವಿನಾ ಕಾರಣ ತಪ್ಪಿತಸ್ಥರನ್ನಾಗಿ ಬಿಂಬಿಸಲು ಯತ್ನಿಸುತ್ತಿದ್ದಾರೆ. ಸಚಿವರಿಗೆ ಕಳಂಕ ತರಲು ಯತ್ನಿಸುತ್ತಿದ್ದು, ಅವರು ರಾಜೀನಾಮೆ ನೀಡಬಾರದೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕಳೆದ ವಾರ ಟಿಪ್ಪು ಜಯಂತಿ ಆಚರಣೆಯ ಸಂದರ್ಭದಲ್ಲಿ ಸೇಠ್ ಮೊಬೈಲಿನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದಾಗ ಸಿಕ್ಕಿಹಾಕಿಕೊಂಡಿದ್ದರು. ಈ ವಿಚಾರವನ್ನು ವಿಪಕ್ಷಗಳು ಬಹುವಾಗಿ ಟೀಕಿಸಿದ್ದು, ರಾಜೀನಾಮೆ ನೀಡುವಂತೆ ಆಗ್ರಹಿಸಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗಳು ನಡೆದಿದ್ದವು. ಆದರೆ, ಸೇಠ್ ಅವರು ನಾನು ಯಾವುದೇ ಚಿತ್ರ ವೀಕ್ಷಿಸಲಿಲ್ಲ ಮತ್ತು ತಪ್ಪು ಮಾಡಿಲ್ಲ. ರಾಜ್ಯಾದ್ಯಂತ ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿದಂತೆ ವಿಡಿಯೋಗಳನ್ನು ಪರಿಶೀಲಿಸುತ್ತಿದ್ದೆ ಎಂದು ಹೇಳಿಕೆ ನೀಡಿದ್ದರು.