
ಮೈಸೂರು
ಸಮುದಾಯ ಕರ್ನಾಟಕ ರಾಜ್ಯ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ
ಸಮುದಾಯ ಕರ್ನಾಟಕ ರಾಜ್ಯ ಸಮಿತಿಯು ನ.13 ಮತ್ತು 14 ರಂದು ಆಯೋಜಿಸಿದ್ದ 6ನೇ ರಾಜ್ಯ ಸಮ್ಮೇಳನದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಮತ್ತು ಕೆಲವೊಂದು ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ಸಮುದಾಯದ ಮಾಜಿ ರಾಜ್ಯಾಧ್ಯಕ್ಷ ಆರ್.ಕೆ.ಹುಡಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಧ್ಯಕ್ಷರಾಗಿ ಅಚ್ಚುತ, ಉಪಾಧ್ಯಕ್ಷರಾಗಿ ಟಿ. ಸುರೇಂದ್ರ ರಾವ್, ವಾಸುದೇವ ಉಚ್ಚಿಲ್, ಬಿ.ಇ. ಈಳಿಗೇರ, ಪ್ರಧಾನ ಕಾರ್ಯದರ್ಶಿಯಾಗಿ ಎಸ್. ದೇವೇಂದ್ರಗೌಡ, ಸಂಘಟನಾ ಕಾರ್ಯದರ್ಶಿಯಾಗಿ ಡಾ.ವಿಠ್ಠಲ ಭಂಡಾರಿ, ಜಂಟಿ ಕಾರ್ಯದರ್ಶಿಯಾಗಿ ವಿಮಲ ಕೆ.ಎಸ್, ಉದಯ ಗಾಂವ್ ಕರ್, ಖಜಾಂಚಿಯಾಗಿ ವಸಂತರಾಜ ಮತ್ತು 20 ಜನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.
ಜೊತೆಗೆ ಸಮ್ಮೇಳನದಲ್ಲಿ 6 ನಿರ್ಣಯಗಳನ್ನು ಕೈಗೊಳ್ಳಲಾಯಿತು. ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಒತ್ತಾಯ, ಮಾಧ್ಯಮ ಪುರೋಹಿತಶಾಹಿ ಪ್ರವೃತ್ತಿಗೆ ಖಂಡನೆ, ಮಾಧ್ಯಮ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವುದು, ದಲಿತರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಮೇಲಿನ ಹಲ್ಲೆಗೆ ಖಂಡನೆ, ಭಾರತ ಮತ್ತು ಕರ್ನಾಟಕದ ಬಹುತ್ವ ಉಳಿಸಲು ಕರೆ, 18 ವರ್ಷದವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸಲು ಶಿಕ್ಷಣದ ರಾಷ್ಡ್ರೀಕರಣಕ್ಕಾಗಿ ಒತ್ತಾಯ, ಡಾ.ಕಲಬುರ್ಗಿಯವರ ಹತ್ಯೆ ಮಾಡಿದವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹ – ಇವೇ ಮೊದಲಾದ ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ ಅಚ್ಚುತ, ಕಾರ್ಯದರ್ಶಿ ದೇವೇಂದ್ರಗೌಡ, ಸಂಘಟನಾ ಕಾರ್ಯದರ್ಶಿ ವಿಠ್ಠಲ ಭಂಡಾರಿ ಹಾಜರಿದ್ದರು.