ಕರ್ನಾಟಕ

ಜನಸ್ನೇಹಿ ಪೊಲೀಸ್ ಠಾಣೆಗೆ ಚಾಲನೆ ನೀಡಿದ ಎಸ್ಪಿ ಜಿ.ರಾಧಿಕ

ಪಾಂಡವಪುರ,ಡಿ.16-ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಮಂಡ್ಯ ಜಿಲ್ಲೆಯ ಎಲ್ಲಾ ತಾಲೂಕು ಪೊಲೀಸ್ ಠಾಣೆಯಲ್ಲೂ ಜನಸ್ನೇಹಿ ಪೊಲೀಸ್ ಠಾಣೆಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಎಸ್‍ಪಿ ಜಿ.ರಾಧಿಕ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ನೂತನವಾಗಿ ಪ್ರಾರಂಭಗೊಂಡ ಜನಸ್ನೇಹಿ ಪೊಲೀಸ್ ಠಾಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸಮಸ್ಯೆಗಳನ್ನು ಹೊತ್ತು ಪೊಲೀಸ್ ಠಾಣೆಗೆ ಆಗಮಿಸುವ ಸಾರ್ವಜನಿಕರಿಗೆ ಪೊಲೀಸರಿಂದ ಯಾವ ರೀತಿಯ ನೆರವು ದೊರೆಯಬೇಕು, ಸಮಸ್ಯೆಗಳನ್ನು ಹೇಗೆ ನಿವಾರಣೆ ಮಾಡಬೇಕು, ದೂರವಾಣಿ ಕರೆ ಬಂದಾಗ ಸ್ವೀಕರಿಸಿ ಯಾವ ಮಾಹಿತಿಗಳನ್ನು ಸ್ವೀಕರಿಸಬೇಕು, ಸಮಸ್ಯೆ ಹೊತ್ತುಬರುವ ಸಾರ್ವಜನಿಕರನ್ನು ಹೇಗೆ ಮನವೊಲಿಸಬೇಕು, ಸಾರ್ವಜನಿಕರಿಗೆ ಪೊಲೀಸರ ಬಗ್ಗೆ ಇರುವಂತಹ ಭಯದ ವಾತಾವರಣವನ್ನು ಹೋಗಲಾಡಿಸಿ ಪೊಲೀಸರು ಮತ್ತು ಸಾರ್ವಜನಿಕರ ನಡುವಿನ ಸಂಬಂಧವನ್ನು ಉತ್ತಮಗೊಳಿಸುವ ಉದ್ದೇಶದಿಂದ ಜನಸ್ನೇಹಿ ಪೊಲೀಸ್ ಠಾಣೆಯನ್ನು ತೆರೆಯಲಾಗಿದೆ ಎಂದು ಹೇಳಿದರು.

ಜನಸ್ನೇಹಿ ಪೊಲೀಸ್ ಠಾಣೆಯಲ್ಲಿ ದಿನದ 24 ಗಂಟೆಗಳ ಕಾಲ ಸೇವೆ ದೊರೆಯಲಿದ್ದು, ಇಲ್ಲಿ ಪೊಲೀಸರು ಹೇಗೆ ಕಾರ್ಯನಿರ್ವಹಿಸಬೇಕು ಎನ್ನುವ ಬಗ್ಗೆ ಹೀಗಾಗಲೆ ಐಜಿ ಕಚೇರಿಯಲ್ಲಿ ಕೆಲವು ಡಿವೈಎಸ್‍ಪಿ, ಸರ್ಕಲ್ ಇನ್ಸ್‍ಪೆಕ್ಟರ್, ಎಸ್‍ಐ ಮತ್ತು ಪೊಲೀಸ್ ಪೇದೆಗಳಿಗೆ ತರಬೇತಿಯನ್ನು ಸಹ ನೀಡಲಾಗಿದೆ. ಹಾಗಾಗಿ ಸಾರ್ವಜನಿಕರು ನಿಮ್ಮ ಸಮಸ್ಯೆಯನ್ನು ಜನಸ್ನೇಹಿ ಪೊಲೀಸ್ ಠಾಣೆಯಲ್ಲಿ ಹೇಳಿ ಪರಿಹಾರ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಎಂ.ಕೆ.ದೀಪಕ್, ಸಬ್ ಇನ್ಸ್‍ಪೆಕ್ಟರ್ ಸುಮಾರಾಣಿ ಹಾಜರಿದ್ದರು. (ವರದಿ-ಕೆ.ಎಸ್, ಎಂ.ಎನ್)

Leave a Reply

comments

Related Articles

error: