
ಕರ್ನಾಟಕ
ಮಕ್ಕಳಿಗೆ ನ್ಯಾಯ ಒದಗಿಸುವುದೇ ದೇಶದ ಭವಿಷ್ಯಕ್ಕೆ ಮುನ್ನುಡಿ
ಹಾಸನ (ಡಿ.18): ಸಕಲೇಶಪುರ ತಾಲ್ಲೂಕಿನ ಬೆಳಗೋಡು ಹೋಬಳಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗಾಗಿ ಆಯೋಜಿಸಿದ್ದ ಮಕ್ಕಳ ಸಂರಕ್ಷಣೆ, ಬಾಲ್ಯವಿವಾಹ ತಡೆ, ಬಾಲನ್ಯಾಯ ವ್ಯವಸ್ಥೆ ಕುರಿತ ಜಾಗೃತಿ ಕಾರ್ಯಾಗಾರದಲ್ಲಿ ಉದ್ಘಾಟಕರಾಗಿ ಆಗಮಿಸಿದ್ದ ಕೆ.ಸಿ ದೇವರಾಜೇಗೌಡ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಹಾಗೂ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯತ್, ಹಾಸನ. ಇವರು ಮಾತನಾಡುತ್ತಾ ಮಕ್ಕಳು ದೇಶದ ಸಂಪತ್ತು ಇಂದಿನ ಮಕ್ಕಳು ಮುಂದಿನ ಕಾಲದ ಮಾನವ ಸಂಪನ್ಮೂಲವಾಗಿ ರೂಪುಗೊಂಡು ದೇಶವನ್ನು ಮುನ್ನೆಡೆಸುತ್ತಾರೆ.
ಆದ್ದರಿಂದಲೇ ಭಾರತ ದೇಶದ ಉಜ್ವಲ ಭವಿಷ್ಯವು ಇಂದಿನ ಮಕ್ಕಳ ಪುಟ್ಟ ಹೆಜ್ಜೆಯಲ್ಲಿ ಮುನ್ನುಗ್ಗುತ್ತಿದೆ ಎಂದು ಅಭಿಪ್ರಾಯ ಪಟ್ಟರು.
ಪ್ರಪಂಚದಲ್ಲಿ ಅತ್ಯಂತ ಹೆಚ್ಚಿನ ಮಕ್ಕಳ ಜನಸಂಖ್ಯೆಯನ್ನು ಹೊಂದಿರುವ 2ನೇ ದೇಶ ಭಾರತ ಇಲ್ಲಿ ಸರಿಸುಮಾರು 47 ಕೋಟಿ 18 ವರ್ಷದೊಳಗಿನ ಮಕ್ಕಳಿದ್ದಾರೆ.
ಇವರಿಗೆ ಸೂಕ್ತ ಹಕ್ಕುಗಳು ಸಿಕ್ಕಿಲ್ಲ, ಅವಕಾಶಗಳು ದೊರೆತಿಲ್ಲ ಉತ್ತಮ ಪ್ರಜೆಗಳಾಗಿ ದೇಶಕ್ಕೆ ಕೊಡುಗೆ ನೀಡುತ್ತಾರೆ, ಇಲ್ಲದಿದ್ದರೆ ಬಾಲ್ಯದಲ್ಲಿಯೇ ಹಲವು ಸಮಸ್ಯೆಗಳಿಗೆ ಬಲಿಯಾಗಿ, ದೌರ್ಜನ್ಯಕ್ಕೆ ಒಳಗಾಗಿ ಸೂಕ್ತ ಬಾಲ್ಯವನ್ನು ಅನುಭವಿಸದೆ, ನಿರುಪಯುಕ್ತ ವ್ಯಕ್ತಿಗಳಾಗಿ ಕೊಲೆ, ಸುಲಿಗೆ ಇತರೆ ಅಹಿತಕರ ಘಟನೆಗಳಲ್ಲಿ ಭಾಗಿಯಾಗಿ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಾರೆ. ಜೊತೆಗೆ ದೇಶದ ಪ್ರಗತಿಗೆ, ಕುಟುಂಬಕ್ಕೆ ಹೊರೆಯಾಗುತ್ತಾರೆ ಎಂದರು.
ದೇಶದಲ್ಲಿ ಸಂಕಷ್ಟದಲ್ಲಿರುವ ಮಕ್ಕಳನ್ನು ಸಂರಕ್ಷಿಸಲು ಅವರಿಗೆ ಸೂಕ್ತ ಪುನರ್ವಸತಿ ಕಲ್ಪಿಸಲು ಸಮಗ್ರ ಮಕ್ಕಳ ರಕ್ಷಣಾ ಯೋಜನೆ ಜಾರಿಯಲ್ಲಿದೆ, ಈ ಯೋಜನೆಯಡಿ ಬರುವ ಕಾರ್ಯಕ್ರಮಗಳನ್ನು ಅರ್ಥಮಾಡಿಕೊಂಡು ಮಕ್ಕಳಿಗೆ ನೆರವು ನೀಡಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಹಾಸನ ಉಪ-ನಿರ್ದೇಶಕರಾದ ಕೆ, ಪದ್ಮ ಅವರು ಮಾತನಾಡುತ್ತಾ ಐ.ಸಿ.ಪಿ.ಎಸ್ ಯೋಜನೆಯು ನಮ್ಮ ಇಲಾಖೆಯ ಅತಿ ದೊಡ್ಡ ಯೋಜನೆಯಾಗಿದ್ದು, ಈ ಯೋಜನೆಯಡಿ ಬಾಲಮಂದಿರಗಳು, ಅನಾಥ, ಸಂಕಷ್ಟದಲ್ಲಿರುವ ಮಕ್ಕಳನ್ನು ಪೋಷಿಸಲು ಸ್ಥಾಪಿಸಲಾಗಿದೆ.
ಇನ್ನು ದತ್ತು ಸ್ವೀಕಾರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲದೇ ಅನಾಥ ಪರಿತ್ಯಕ್ತ ಮಕ್ಕಳನ್ನು ಸ್ವೀಕರಿಸಲು ಬಾಲಮಂದಿರ ಹಾಗೂ ದತ್ತು ಸಂಸ್ಥೆಯಲ್ಲಿ ಮಮತೆಯ ತೊಟ್ಟಿಲುಗಳನ್ನು ಸ್ಥಾಪಿಸಲಾಗಿದೆ. ಐ.ಸಿ.ಪಿ.ಎಸ್ ನಡಿ ಸಂಕಷ್ಟದಲ್ಲಿರುವ ಮಕ್ಕಳನ್ನು ರಕ್ಷಿಸಲು ಮಕ್ಕಳ ಸಹಾಯವಾಣಿ-1098 ಕಾರ್ಯನಿರ್ವಹಿಸುತ್ತಿದೆ ಎಂದರು.
ಯಾವುದೇ ಅನಾಥ, ಪರಿತ್ಯಕ್ತ, ಬಾಲಕಾರ್ಮಿಕ, ಮಕ್ಕಳ ಕಳ್ಳ ಸಾಗಾಣಿಕೆಗೆ ಒಳಪಟ್ಟ, ದೌರ್ಜನ್ಯ ಇನ್ನಿತರೆ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಸೂಕ್ತ ರಕ್ಷಣೆ ಹಾಗೂ ಪುನರ್ವಸತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ಥಾವಿಕವಾಗಿ ಮಾತನಾಡಿದ ಕಾಂತರಾಜು, ರಕ್ಷಣಾಧಿಕಾರಿ (ಅಸಾಂಸ್ಥಿಕ ಸೇವೆ), ಜಿಲ್ಲಾ ಸಮಗ್ರ ಮಕ್ಕಳ ರಕ್ಷಣಾ ಘಟಕ, ಹಾಸನ ಇವರು ಮಕ್ಕಳ ರಕ್ಷಣಾ ಘಟಕದಿಂದ ಎಲ್ಲಾ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳಿಗೆ ಮಕ್ಕಳ ರಕ್ಷಣೆ ಹಾಗೂ ಬಾಲನ್ಯಾಯ ವ್ಯವಸ್ಥೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಆದ್ದರಿಂದ ಈ ಕಾರ್ಯಾಗಾರದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಿ ಎಂದರು.
ವೇದಿಕೆಯಲ್ಲಿ ಟಿ.ಹೆಚ್.ಒ ಡಾ.ಮಹೇಶ್, ಇ.ಸಿ.ಓ. ಯಶೋಧಮ್ಮ, ಓಂಕಾರಮೂರ್ತಿ ಇದ್ದರು, ನಿರೂಪಣೆಯನ್ನು ಶಿವಣ್ಣ ನೆರವೇರಿಸಿದರೆ, ಎಲ್ಲರಿಗೂ ಲೋಹಿತ್ ಸ್ವಾಗತಿಸಿದರು ಹಾಗೂ ಸಂತೋಷ್ ವಂದನಾರ್ಪಣೆ ಮಾಡಿದರು.
(ಎನ್ಬಿಎನ್)