
ಪ್ರಮುಖ ಸುದ್ದಿ
ಕಾಮನ್ ವೆಲ್ತ್ ರೆಸ್ಲಿಂಗ್ ಚಾಂಪಿಯನ್ ಶಿಪ್: ಚಿನ್ನದ ಪದಕ ಗೆದ್ದ ಸಾಕ್ಷಿ ಮಲ್ಲಿಕ್, ಸುಶೀಲ್ ಕುಮಾರ್
ಜೊಹಾನ್ಸ್ ಬರ್ಗ್,ಡಿ.18-ಕಾಮನ್ ವೆಲ್ತ್ ರೆಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತ ಪದಕದ ಬೇಟೆ ಮುಂದುವರೆಸಿದ್ದು, ಭಾರತದ ಕುಸ್ತಿ ಪಟುಗಳಾದ ಸಾಕ್ಷಿ ಮಲ್ಲಿಕ್ ಹಾಗೂ ಸುಶೀಲ್ ಕುಮಾರ್ ಚಿನ್ನದ ಪದಕ ಗಳಿಸುವ ಮೂಲಕ ಭಾರತದ ಪದಕಗಳಿಕೆಯನ್ನು 59ಕ್ಕೆ ಏರಿಕೆ ಮಾಡಿದ್ದಾರೆ.
ದಕ್ಷಿಣ ಆಫ್ರಿಕಾದ ಜೋಹನ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ರೆಸ್ಲಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾನುವಾರ ನಡೆದ ಪುರುಷರ ವಿಭಾಗದ 74 ಕೆ.ಜಿ. ಫ್ರೀಸ್ಟೈಲ್ ವಿಭಾಗದ ಫೈನಲ್ನಲ್ಲಿ ಸುಶೀಲ್ ಕುಮಾರ್ ನ್ಯೂಜಿಲೆಂಡ್ನ ಆಕಾಶ್ ಖುಲ್ಲರ್ ಅವರನ್ನು ಮಣಿಸಿ ಚಿನ್ನದ ಪದಕ ಗಳಿಸಿಕೊಂಡರೆ, ಮಹಿಳೆಯರ ವಿಭಾಗದಲ್ಲಿ ಸಾಕ್ಷಿ ಮಲಿಕ್ 62 ಕೆ.ಜಿ ವಿಭಾಗದ ಫೈನಲ್ನಲ್ಲಿ ನ್ಯೂಜಿಲೆಂಡ್ನ ತಾಯಲಾ ತುಹಾನೆ ಫೋರ್ಡ್ ಅವರನ್ನು 13-2 ಅಂತರದಿಂದ ಸೋಲಿಸುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟರು.
ಇನ್ನೂ ಟೂರ್ನಿಯಲ್ಲಿ ಭಾರತೀಯ ಕ್ರೀಡಾಪಟುಗಳು ಅದ್ಭುತವಾಗಿ ಪದಕ ಬೇಟೆ ಮುಂದುವರೆಸಿದ್ದು, ಶನಿವಾರವಷ್ಟೇ ಭಾರತೀಯ ಮಹಿಳಾ ಕುಸ್ತಿ ಪಟುಗಳು ಒಟ್ಟು 9 ಚಿನ್ನ ಮತ್ತು 7 ಬೆಳ್ಳಿ ಪದಕ ಜಯಿಸಿದ್ದರು. ನಿನ್ನೆ ಸಾಕ್ಷಿ ಮಲ್ಲಿಕ್ ಮತ್ತು ಸುಶೀಲ್ ಕುಮಾರ್ ಚಿನ್ನದ ಪದಕಗಳಿಸುವ ಮೂಲಕ ಭಾರತದ ಪದಕಗಳಿಕೆಯನ್ನು 59ಕ್ಕೆ ಏರಿಕೆ ಮಾಡಿದ್ದಾರೆ. ಈ ಪೈಕಿ ಭಾರತ ಟೂರ್ನಿಯಲ್ಲಿ ಒಟ್ಟು 29 ಚಿನ್ನ, 24 ಬೆಳ್ಳಿ ಮತ್ತು 6 ಕಂಚಿನ ಪದಕಗಳನ್ನು ಜಯಿಸಿದಂತಾಗಿದೆ. (ವರದಿ-ಎಂ.ಎನ್)