ಕರ್ನಾಟಕ

ವಿವಾಹವಾಗಿ ಐದೇ ದಿನಕ್ಕೆ ನವವಿವಾಹಿತೆ ಪರಾರಿ

ರಾಜ್ಯ(ಹಾಸನ)ಡಿ.19:- ಮದುವೆಯಾಗಿ ಕೇವಲ ಐದೇ ದಿನದಲ್ಲೇ ಮನೆಯವರಿಗೆಲ್ಲಾ ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ನವವಿವಾಹಿತೆಯೋರ್ವಳು ಪರಾರಿಯಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೊಂತನಮನೆ ಗ್ರಾಮದಲ್ಲಿ ನಡೆದಿದೆ.

ಕಳೆದ ಡಿಸೆಂಬರ್ 6ರಂದು ಸಕಲೇಶಪುರ ತಾಲೂಕಿನ ಹಾನುಬಾಳು ಸಮೀಪದ ಹಾದಿಗೆಯ ಕುಸುಮಾ ಎಂಬಾಕೆಯನ್ನು ಸಕಲೇಶಪುರ ತಾಲೂಕಿನ ಕೊಂತನಮನೆ ಯವಕ ಮೋಹನ್ ಎಂಬಾತನಿಗೆ ವಿವಾಹ ಮಾಡಿ ಕೊಡಲಾಗಿತ್ತು. ಆದರೆ ಆಕೆ ವಿವಾಹವಾಗಿ ಐದೇ ದಿನಕ್ಕೆ ಪರಾರಿಯಾಗಿದ್ದಾಳೆ. ರಾತ್ರೋರಾತ್ರಿ ಓಡಿಹೋಗಿದ್ದರಿಂದ ವರನ ಮನೆಯವರು ಕಂಗಲಾಗಿದ್ದಾರೆ.  ಪರಾರಿಯಾದ ಎರಡು ದಿನಗಳ ಬಳಿಕ ಪೊಲೀಸರ ಎದುರು ಬಂದು ಈ ಮದುವೆ ನನಗೆ ಇಷ್ಟವಿರಲಿಲ್ಲ, ಮನೆಯವರು ಒತ್ತಾಯಪೂರ್ವಕವಾಗಿ ಮದುವೆ ಮಾಡಿಸಿದ್ದಾರೆ ಎಂದು ನವವಿವಾಹಿತೆ ತನ್ನ ಪತಿ ಹಾಗೂ ಸೋದರ ಮಾವನ ವಿರುದ್ಧ ದೂರು ನೀಡಿದ್ದಾಳೆ. ಆದರೆ ಹುಡುಗಿಗೆ ತಂದೆ ತಾಯಿ ಇಲ್ಲದಿದ್ದರಿಂದ ಸ್ವತಃ ನಾನೇ ಮುಂದೆ ನಿಂತು ಆಕೆಯ ಒಪ್ಪಿಗೆ ಪಡೆದೇ  ಈ ಮದುವೆ ಮಾಡಿಸಿದ್ದೇನೆ. ಆದರೆ ಯಾಕೆ ಈ ರೀತಿ ಮಾಡಿ, ನನ್ನ ವಿರುದ್ಧವೇ ದೂರು ನೀಡಿದ್ದಾಳೆ ಎನ್ನುವುದೇ ತಿಳಿಯದಾಗಿದೆ ಎಂದು ಹುಡುಗಿಯ ಮಾವ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಎರಡು ಕುಟುಂಬದವರ ಜೊತೆ ಪೊಲೀಸರು ಸಮಾಲೋಚನೆ ನಡೆಸಿದ್ದಾರೆ. ಆದರೆ ಹುಡುಗಿ ಆಪ್ತ ಸಮಾಲೋಚನೆ ವೇಳೆ ತಾನು ಇನ್ನೊಬ್ಬ ಹುಡುಗನನ್ನು ಪ್ರೀತಿಸುತ್ತಿರುವುದಾಗಿ ಬಹಿರಂಗಪಡಿಸಿದ್ದು, ಈ ವಿಚಾರ ವರನ ಮನೆಯವರಿಗೆ ಹಾಗೂ ಆಕೆಯ ಸೋದರ ಮಾವನಿಗೆ ಬರಸಿಡಿಲು ಬಡಿದಂತಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: