
ಮೈಸೂರು
ವಿಳಾಸ ಕೇಳುವ ನೆಪದಲ್ಲಿ ಮಾಂಗಲ್ಯ ಸರ ಅಪಹರಣ
ಮೈಸೂರು,ಡಿ.19:- ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಮುಖಕ್ಕೆ ರಾಸಾಯನಿಕ ಸಿಂಪಡಿಸಿ, ಪ್ರಜ್ಞೆ ತಪ್ಪಿಸಿ ಮಹಿಳೆಯ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಯುವತಿಯೋರ್ವಳು ಅಪಹರಿಸಿದ ಘಟನೆ ನಗರದಲ್ಲಿ ನಡೆದಿದೆ.
ಇಲ್ಲಿನ ವಿದ್ಯಾರಣ್ಯ ಪುರಂ ನಿವಾಸಿ ನಾಗಮ್ಮ ಕತ್ತಿನಲ್ಲಿದ್ದ ಮಾಂಗಲ್ಯ ಸರ ಕಳೆದುಕೊಂಡವರಾಗಿದ್ದಾರೆ. ಶನಿವಾರ ಮಧ್ಯಾಹ್ನ ಮಹಿಳಾ ಸಂಘದ ಹಣವನ್ನು ಬ್ಯಾಂಕ್ ಗೆ ಕಟ್ಟಲು ಹೋಗುತ್ತಿದ್ದ ಸಮಯದಲ್ಲಿ ನೂರಡಿ ರಸ್ತೆಯ ಸಹಕಾರ ಭವನದ ಬಳಿ ಹೋಗುತ್ತಿದ್ದಾಗ ಯುವತಿಯೋರ್ವಳು ಬಳಿ ಬಂದು ನನ್ನ ತಂಗಿಗೆ ಹುಷಾರಿಲ್ಲ. ಇಲ್ಲೆಲ್ಲಿಯಾದರೂ ಆಸ್ಪತ್ರೆ ಇದೆಯಾ ಎಂದು ಕೇಳಿದ್ದು, ನನಗೆ ಗೊತ್ತಿಲ್ಲ ಎಂದು ಮುಂದಕ್ಕೆ ತೆರಳಿದಾಗ ಯುವತಿ ಮಹಿಳೆಯನ್ನು ಹಿಂಬಾಲಿಸಿದ್ದಾಳೆ. ಯುವತಿ ತೀರಾ ಹತ್ತಿರಕ್ಕೆ ಬಂದು ಮಹಿಳೆಯ ಮುಖಕ್ಕೆ ರಾಸಾಯನಿಕ ಸಿಂಪಡಿಸಿದ್ದು, ಕೂಡಲೇ ಮಹಿಳೆ ಪ್ರಜ್ಞೆ ತಪ್ಪಿದ್ದಾರೆ. ಕೆಲಹೊತ್ತಿನ ಬಳಿಕ ಮಹಿಳೆ ಎಚ್ಚರಗೊಂಡಾಗ ಕತ್ತಿನಲ್ಲಿದ್ದ ಮಾಂಗಲ್ಯ ಸರ ಕಳುವಾಗಿರುವುದು ತಿಳಿದು ಬಂತು. ಕೂಡಲೇ ಕುಟುಂಬದವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಬಳಿಕ ಕೆ.ಆರ್.ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. (ಕೆ.ಎಸ್,ಎಸ್.ಎಚ್)