ದೇಶಪ್ರಮುಖ ಸುದ್ದಿ

ಗುಜರಾತ್ ಮಾದರಿ ಅಲುಗಾಡಿದೆ, 2019 ರಲ್ಲಿ ಬಿಜೆಪಿ ಗೆಲುವು ಕಷ್ಟಕರ: ಉದ್ಧವ್‍ ಠಾಕ್ರೆ

ಮುಂಬೈ(ಡಿ.19): ಗುಜರಾತ್‍ನಲ್ಲಿ ಪ್ರಯಾಸದ ಗೆಲುವು ಸಾಧಿಸಿರುವ ಬಿಜೆಪಿಗೆ ಎನ್‍ಡಿಎ ಮೈತ್ರಿಕೂಟದ ಮಿತ್ರಪಕ್ಷ ಶಿವಸೇನೆ ಕಾಲೆಳೆದಿದೆ.

ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಬಿಜೆಪಿ ವಿರುದ್ಧ ಟೀಕೆ ಮಾಡಿರುವ ಶಿವಸೇನೆ ಗುಜರಾತ್ ಮಾದರಿ ಅಲುಗಾಡಿದೆ. 2019 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲದಿರಲಿ ಎಂದು ವ್ಯಂಗ್ಯಭರಿತ ಎಚ್ಚರಿಕೆ ನೀಡಿದೆ.

ಶಿವಸೇನೆ ಮುಖವಾಣಿ “ಸಾಮ್ನಾ”ದಲ್ಲಿ ಸಂಪಾದಕೀಯ ಲೇಖನ ಪ್ರಕಟಿಸಿರುವ ಶಿವಸೇನೆ, ಗುಜರಾತ್‍ನಲ್ಲಿ ಚುನಾವಣೆ ಗೆಲ್ಲುವುದಕ್ಕಾಗಿ ಬಿಜೆಪಿ ಭಾವನಾತ್ಮಕ ವಿಷಯಗಳು ಹಾಗೂ ಹಿಂದೂ-ಮುಸ್ಲಿಮರ ವಿಭಜನೆಯನ್ನು ಬಳಸಿಕೊಂಡಿದೆ ಎಂದು ಆರೋಪಿಸಿದೆ. ಮಾತ್ರವಲ್ಲ 22 ವರ್ಷಗಳಲ್ಲಿ ನಡೆದಿರುವ ಅಭಿವೃದ್ಧಿಯ ಬಗ್ಗೆ ಯಾವುದೇ ಬಿಜೆಪಿ ನಾಯಕನೂ ಮಾತನಾಡಲು ಬಯಸುತ್ತಿರಲಿಲ್ಲವೇಕೆ ಎಂದು ಪ್ರಶ್ನಿಸಿದೆ.

ಗುಜರಾತ್‍ನಲ್ಲಿ ಹಿಂದಿನ ಚುನಾವಣೆಗಿಂತ ಬಿಜೆಪಿ ಕಡಿಮೆ ಸ್ಥಾನಗಳನ್ನು ಪಡೆದಿದೆ. ಇದು ಆ ಪಕ್ಷಕ್ಕೆ ಎಚ್ಚರಿಕೆಯ ಗಂಟೆಯಾಗಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕುಸಿಯುವುದಿಲ್ಲ ಎಂಬ ಆಶಯವಿದೆ ಎಂದು ಮೂದಲಿಸಿದೆ. ಬಿಜೆಪಿಯ ಗೆಲುವಿಗಿಂತಲೂ ಹೆಚ್ಚಾಗಿ ಎಲ್ಲರೂ ಗುಜರಾತ್‍ನಲ್ಲಿ ರಾಹುಲ್ ಗಾಂಧಿಯವರ ಕಾಂಗ್ರೆಸ್ ಪಕ್ಷ ಪುಟಿದೆದ್ದಿರುವುದರ ಬಗ್ಗೆ ಮಾತನಾಡುತ್ತಿದ್ದಾರೆ. ಚುನಾವಣಾ ಫಲಿತಾಂಶದಿಂದ ತಿಳಿದುಬರುವ ಪ್ರಮುಖವಾದ ಅಂಶ ಈ ಚುನಾವಣೆಯಲ್ಲಿ ಕಾಂಗ್ರೆಸ್ ನಿಜವಾದ ಜಯಶಾಲಿ ಎಂದು “ಸಾಮ್ನಾ”ದಲ್ಲಿ ವಿಶ್ಲೇಷಣೆ ಮಾಡಲಾಗಿದೆ.

(ಎನ್‍ಬಿಎನ್‍)

Leave a Reply

comments

Related Articles

error: