ಪ್ರಮುಖ ಸುದ್ದಿಮೈಸೂರು

ಕ್ರೈಸ್ತರು ತಮ್ಮ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನದಲ್ಲಿ ತೊಡಗಿಸಿಕೊಳ್ಳಿ : ಐವನ್ ಡಿಸೋಜಾ

ಮೈಸೂರು,ಡಿ.19:- ಕ್ರೈಸ್ತರು ತಮ್ಮ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನದಲ್ಲಿ ಈಗಿನಿಂದಲೇ ತೊಡಗಿಸಿಕೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ, ಮುಖ್ಯ ಸಚೇತಕ ಐವನ್ ಡಿಸೋಜಾ ತಿಳಿಸಿದರು.

ಸಂತ ತೆರೇಸಾ ರಸ್ತೆಯಲ್ಲಿರುವ ಸಿಎಸ್ ಐ ವೆಸ್ಲಿ ಚರ್ಚ್ ನಲ್ಲಿ ಕ್ರೈಸ್ತರ ಪ್ರಗತಿಪರ ಸಮಿತಿ ವತಿಯಿಂದ ಅಂಧಮಕ್ಕಳೊಂದಿಗೆ ಕ್ರಿಸ್ಮಸ್ ಆಚರಣೆ ಮತ್ತು ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕ್ರೈಸ್ತರಿಗೆ ಸರ್ಕಾರದಿಂದ ಸಿಗುವ ಯೋಜನೆಗಳನ್ನು ಪಡೆದು ಸದುಪಯೋಗಪಡಿಸಿಕೊಳ್ಳಿ ಎಂದರು. ಈಗಾಗಲೇ  ಚರ್ಚ್ ಗಳ ದುರಸ್ತಿಗಾಗಿ 29ಅರ್ಜಿ, ಸ್ಮಶಾನಗಳ ಅಭಿವೃದ್ಧಿಗಾಗಿ 21 ಅರ್ಜಿ, ಸಮುದಾಯಭವನಕ್ಕಾಗಿ 13ಅರ್ಜಿ ಗಳು ಸೇರಿದಂತೆ ವಿವಿಧ ಅಭಿವೃದ್ಧಿಗಾಗಿ ಅರ್ಜಿಗಳು ಬಂದಿವೆ. ನಾವು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ನೀಡಿದ ಹಣವನ್ನಷ್ಟೇ ಅಭಿವೃದ್ಧಿಗಾಗಿ  ಉಪಯೋಗಿಸಬೇಕಾಗಿದೆ. ಅದಕ್ಕಾಗಿ ಕ್ರಿಶ್ಚಿಯನ್ ಡೆವಲಪ್ ಮೆಂಟ್ ಬೋರ್ಡ್ ರಚನೆಗೆ ಒತ್ತಾಯಿಸಿದ್ದೇವೆ ಎಂದರು. ಕ್ರೈಸ್ತ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಅನೇಕ ಯೋಜನೆಗಳನ್ನು ನೀಡಲಾಗುತ್ತಿದೆ. ಎಂಬಿಎ, ಎಂಸಿಎ, ನರ್ಸಿಂಗ್ ಮಾಡುವವರಿಗೆ ವಿದ್ಯಾರ್ಥಿ ವೇತನ, ಎಎಸ್, ಐಪಿಎಸ್ ಮಾಡುವವರಿಗೆ ತರಬೇತಿ ಜೊತೆ ಸ್ಟೈಫಂಡ್ ನೀಡಲಾಗುತ್ತದೆ. ಆದರೆ ಎಷ್ಟು ಮಂದಿ ಈ ಹುದ್ದೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂದಿನ ಪೀಳಿಗೆಯನ್ನು ಅಸ್ತಿತ್ವದಲ್ಲಿ ಉಳಿಸಿಕೊಳ್ಳಬೇಕು. ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು ಎಂದರು. ಕ್ರೈಸ್ತ ಸಂದೇಶ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ, ಆ ಮೂಲಕ ಸಮಾಜದಲ್ಲಿ ಒಳ್ಳೆಯ ಕೆಲಸಗಳು ನಡೆಯಲಿ, ಕ್ರೈಸ್ತ ಸಂದೇಶ ಸಮಾಜ ಕಟ್ಟಲು ಬಲಿಷ್ಠ ಅಸ್ತ್ರವಾಗಲಿ ಎಂದು ಕ್ರಿಸ್ಮಸ್ ಹಬ್ಬದ ಸಲುವಾಗಿ ಶುಭಕೋರಿದರು.

ಈ ಸಂದರ್ಭ ವಕೀಲರಾದ ಎಂ.ಎಸ್,ಮರಿಯಾದಾಸ್, ಡಿವೈಎಸ್ ಪಿ ಕೆ.ಟಿ.ಮ್ಯಾಥ್ಯೂ, ರೆವೆರೆಂಡ್ ಬೆಕೆಟ್ ಡಿಸೋಜಾ, ಕೆ.ಪಿ.ದೇವಕುಮಾರ್, ರೆವರೆಂಡ್ ವಿಕ್ಟರ್,ರೆವರೆಂಡ್ ಸುಜಾತಾ, ಅಲ್ಪಸಂಖ್ಯಾತ ವಿಭಾಗದ ಜಿಲ್ಲಾ ಆಯುಕ್ತ ಪುಟ್ಟರಾಜು , ಸಮಿತಿ ಅಧ್ಯಕ್ಷ ಜ್ಞಾನಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: