ಮೈಸೂರು

ಸೂರಿಲ್ಲದವರಿಗೆ ಸೂರು, ನಿವೇಶನ ಹಂಚಿಕೆ ಮಾಡಲು ಮುಂದಾಗಿದೆ : ಎಂ.ಕೃಷ್ಣಪ್ಪ

ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೂರಿಲ್ಲದವರಿಗೆ ಸೂರು ಹಾಗೂ ನಿವೇಶನಗಳನ್ನು ಹಂಚಿಕೆ ಮಾಡಲು ಮುಂದಾಗಿದೆ ಎಂದು ವಸತಿ ಸಚಿವ ಎಂ.ಕೃಷ್ಣಪ್ಪ ತಿಳಿಸಿದರು.

ಮೈಸೂರು ಪ್ರಾದೇಶಿಕ ಕಚೇರಿಯಲ್ಲಿ ನಡೆದ ಮೈಸೂರು ವಿಭಾಗದ ಜಿಲ್ಲೆಗಳ ವಸತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಂ.ಕೃಷ್ಣಪ್ಪ,  ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿದೆ. ಅದರಂತೆ ವಸತಿ ಇಲಾಖೆ ವತಿಯಿಂದ 11 ಲಕ್ಷ ಮನೆ ನಿರ್ಮಾಣಕ್ಕೆ ಮುಂದಾಗಿದ್ದು ಇದಕ್ಕಾಗಿ 10.5 ಕೋಟಿ ರೂ ಮೀಸಲಿಡಲಾಗಿದೆ. ಇದರಲ್ಲಿ ಸದ್ಯ ಶೇ.50ರಷ್ಟು ಪ್ರಗತಿ ಸಾಧಿಸಲಾಗಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ ಶೇ.90ರಷ್ಟು ಪ್ರಗತಿ ಸಾಧಿಸುವ ಗುರಿ ಹೊಂದಿದೆ. ಇದಕ್ಕಾಗಿ ಅಧಿಕಾರಿಗಳು ಉತ್ತಮವಾಗಿ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕು. ಅಲ್ಲದೆ ಕಾಮಗಾರಿ ಮುಗಿದಿರುವ ಮನೆಗಳ ಹಂಚಿಕೆ ಕಾರ್ಯ ಅರ್ಧದಷ್ಟು ಮುಗಿದಿದ್ದು  ಇನ್ನುಳಿದ ಮನೆಗಳ ಹಕ್ಕು ಪತ್ರಗಳನ್ನು ಸದ್ಯದಲ್ಲಿಯೇ ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು. ಅಧಿಕಾರಿಗಳು ಶೇ.90ರಷ್ಟು ಸಾಧನೆ ಮಾಡದೇ ಇದ್ದರೆ ನನ್ನ ಮಾತಿನ ಶೈಲಿ ಬೇರೆಯ ರೀತಿಯಲ್ಲಿರುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.

ಸೂರಿಲ್ಲದವರಿಗೆ ಸೂರು, ನಿವೇಶನವಿಲ್ಲದ ಬಡ ಕುಟುಂಬಕ್ಕೆ ನಿವೇಶನ ನೀಡಲು ಸರ್ಕಾರ ಉದ್ದೇಶಿಸಿದ್ದು ಇದಕ್ಕಾಗಿ ಮೈಸೂರು ವಿಭಾಗದ ಮೈಸೂರು, ಮಂಡ್ಯ ಹಾಸನ, ಕೊಡಗು, ಚಾಮರಾಜನಗರ, ಮಂಗಳೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವಸತಿ ಇಲಾಖೆ ವತಿಯಿಂದ ಈಗಾಗಲೇ 9.5 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಿಸುವುದಕ್ಕೆ ಜಮೀನಿನ ಕೊರತೆ ಉಂಟಾದಲ್ಲಿ ಆ ಗ್ರಾಮದಲ್ಲಿನ ಸರ್ಕಾರಿ ಜಮೀನನ್ನು ಬಳಸಿಕೊಳ್ಳುವುದಕ್ಕೆ ಸೂಚಿಸಲಾಗಿದೆ. ಒಂದು ವೇಳೆ ಸರ್ಕಾರಿ ಜಮೀನು ದೊರೆಯದಿದ್ದಲ್ಲಿ ಸೂಕ್ತ ಹಣ ನೀಡಿ ಖಾಸಗಿ ಜಮೀನನ್ನು ಖರೀದಿಸಿ ಬಡಾವಣೆ ನಿರ್ಮಿಸಿ ಬಡವರಿಗೆ ನಿವೇಶನ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ವಸತಿ ಇಲಾಖೆ ನಗರ ಪ್ರದೇಶದಲ್ಲಿ ಪ್ರಗತಿಯಲ್ಲಿ ಹಿಂದೆ ಬಿದ್ದಿದೆ ಎನ್ನುವ ಅಂಶ ಗಮನಕ್ಕೆ ಬಂದಿದ್ದು, ನಗರ ಪ್ರದೇಶಗಳಲ್ಲಿ ಜಮೀನಿನ ಕೊರತೆಯಿಂದ ನಿರೀಕ್ಷೆಯಷ್ಟು ಸಾಧನೆ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನಗರ ಪ್ರದೇಶವನ್ನು ಕೇಂದ್ರೀಕರಿಸಿ ಕೆಲಸ ಮಾಡುವುದಕ್ಕೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ನಗರ ಪ್ರದೇಶಗಳಲ್ಲಿರುವ ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ 2.5 ಸಾವಿರ ಕೋಟಿ ರೂ ಹಣ ಮೀಸಲಿಟ್ಟಿದ್ದು, ಕೊಳಚೆ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವುದರ ಜೊತೆಗೆ 45 ಸಾವಿರ ಮನೆಗಳನ್ನು ನಿರ್ಮಿಸುವ ಗುರಿ ಇದೆ. ಮೈಸೂರು ವಿಭಾಗೀಯ ಜಿಲ್ಲೆಗಳಲ್ಲಿ ಒಟ್ಟು 140 ಕೊಳಚೆ ಪ್ರದೇಶಗಳಿವೆ, ಇವುಗಳ ಅಭಿವೃದ್ಧಿಗೆ 130 ಕೋಟಿ ಹಣವನ್ನು ಸರ್ಕಾರ ಮೀಸಲಿಟ್ಟಿದ್ದು, ಮೂಲ ಸೌಕರ್ಯ ಕಲ್ಪಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ವಸತಿ ಇಲಾಖೆಯ ಆಯುಕ್ತ ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಶಂಭುದಯಾಳ್ ಮೀನಾ ಸೇರಿದಂತೆ ಮೈಸೂರು ವಿಭಾಗದ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ.ನ ಸಿಇಒಗಳು ಉಪಸ್ಥಿತರಿದ್ದರು.

 

Leave a Reply

comments

Related Articles

error: