
ಕರ್ನಾಟಕ
ಹಣಕಾಸಿನ ವಿಚಾರದಲ್ಲಿ ಜಗಳ : ಮುಖ್ಯ ಶಿಕ್ಷಕಿ ಮೇಲೆ ಹಲ್ಲೆ
ರಾಜ್ಯ(ಬೆಂಗಳೂರು) ಡಿ. 19:- ಹಣಕಾಸಿನ ವಿಚಾರದಲ್ಲಿ ಜಗಳ ತೆಗೆದು ಲೇವಾದೇವಿಗಾರನೊಬ್ಬ ಶಾಲೆಗೆ ನುಗ್ಗಿ ಮುಖ್ಯ ಶಿಕ್ಷಕಿ ಮೇಲೆ ಹಲ್ಲೆ ನಡೆಸಿರುವ ಘಟನೆ ರಾಜಾನುಕುಂಟೆಯ ಸಿಂಗನಾಯಕನಹಳ್ಳಿಯಲ್ಲಿ ನಡೆದಿದೆ.
ಆಶಾರಾವ್ ಹಲ್ಲೆಯಿಂದ ಗಾಯಗೊಂಡಿರುವ ಮುಖ್ಯ ಶಿಕ್ಷಕಿಯಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಂಗನಾಯಕನಹಳ್ಳಿಯ ಆರ್ಯನ್ ಸ್ಕೂಲ್ ಮುಖ್ಯ ಶಿಕ್ಷಕಿಯಾಗಿದ್ದ ಆಶಾರಾವ್, ಲೇವಾದೇವಿಗಾರ ರಾಮಕೃಷ್ಣಪ್ಪ ಎಂಬುವರಿಂದ 70 ಸಾವಿರ ಸಾಲ ಪಡೆದಿದ್ದರು. ಸಾಲ ಮರುಪಾವತಿ ವಿಳಂಬ ಮಾಡಿದ್ದರಿಂದ ಆಕ್ರೋಶಗೊಂಡ ರಾಮಕೃಷ್ಣಪ್ಪ, ನಿನ್ನೆ ಸಂಜೆ ಶಾಲೆಗೆ ನುಗ್ಗಿ ಜಗಳ ಮಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದಾಗ ಆಶಾರಾವ್ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಿದ್ದು, ಕುಸಿದು ಬಿದ್ದ ಅವರನ್ನು ಶಾಲಾ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಾಮಕೃಷ್ಣಪ್ಪ ಹಲ್ಲೆ ನಡೆಸಿರುವುದು ಶಾಲೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ರಾಜಾನುಕುಂಟೆ ಪೊಲೀಸರು ಪರಾರಿಯಾಗಿರುವ ರಾಮಕೃಷ್ಣಪ್ಪನಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ರಾಮಕೃಷ್ಣಪ್ಪ ಅವರ ಪುತ್ರ ಜನಾರ್ದನ್, ಯಲಹಂಕ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷನಾಗಿದ್ದಾನೆ. ರಾಮಕೃಷ್ಣಪ್ಪ ಸಿಂಗನಾಯಕನಹಳ್ಳಿ ಸುತ್ತಮುತ್ತ ಪರವಾನಗಿ ಇಲ್ಲದೆ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.(ಕೆ.ಎಸ್,ಎಸ್.ಎಚ್)