ಪ್ರಮುಖ ಸುದ್ದಿಮೈಸೂರು

ಸಾಂಸ್ಕೃತಿಕ ನಗರಿಯಲ್ಲಿ ದುಷ್ಕರ್ಮಿಗಳಿಂದ ವಿಧ್ವಂಸಕ ಕೃತ್ಯಕ್ಕೆ ಯತ್ನ : ಪತ್ತೆಯಾದ ಲಘು ಬಾಂಬ್

ಮೈಸೂರು, ಡಿ.20:- ಬುಧವಾರ ಬೆಳಿಗ್ಗೆ ಎಂಟು ಗಂಟೆಯ ಸುಮಾರಿಗೆ ಪೊಲೀಸ್ ಕಂಟ್ರೋಲ್ ರೂಂ ಗೆ ಅನಾಮಧೇಯ ವ್ಯಕ್ತಿಯಿಂದ ಬಸ್ ನಿಲ್ದಾಣದಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಕರೆ ಬಂದಿತ್ತು. ಸುದೀರ್ಘ ಶೋಧದ ಬಳಿಕ ಪೊಲೀಸರಿಗೆ ಲಘು ಬಾಂಬ್ ದೊರಕಿದ್ದು ಜನತೆಯನ್ನು ಬೆಚ್ಚಿ ಬೀಳಿಸಿದೆ.

ಮೈಸೂರಿನಲ್ಲಿ ಸಿಕ್ಕಿದ್ದು ಲಘು ಬಾಂಬ್ ಎಂದು ಮಾಧ್ಯಮಗಳಿಗೆ  ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ನೀಡಿದ್ದಾರೆ. ಅನುಮಾನಾಸ್ಪದ ವಸ್ತು ಸಿಕ್ಕಿದ್ದು ಪಾರ್ಕ್‌ನಲ್ಲಿ ಅಲ್ಲ. ಬಸ್ ನಿಲ್ದಾಣ ಮುಂಭಾಗದ ರಸ್ತೆಯಲ್ಲಿ ಬಾಕ್ಸ್ ನಲ್ಲಿ ತುಂಬಿತ್ತು. ಸ್ಥಳೀಯ ಕಾರು ಚಾಲಕರು ಪೊಟ್ಟಣ ನೋಡಿ ಅನುಮಾನ ವ್ಯಕ್ತಪಡಿಸಿದರು. ಕಾಲಿನಿಂದ ಒದ್ದು ನೋಡಿದಾಗ ಪೊಟ್ಟಣದಲ್ಲಿ ವೈಯರ್ ಹಾಗೂ ಶೆಲ್‌ಗಳು ಪತ್ತೆಯಾಗಿವೆ. ತಕ್ಷಣ ಸ್ಥಳಿಯ ಟ್ರಾಫಿಕ್ ಪೊಲೀಸರಿಗೆ ಚಾಲಕರು ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿ ವಸ್ತುವನ್ನು  ಪರಿಶೀಲಿಸಿದ ಸಿಬ್ಬಂದಿಗಳು ಲಘು ಬಾಂಬ್ ಎಂದು ತಿಳಿದು ಪಾರ್ಕ್‌‌ ಒಳಗೆ ಸ್ಥಳಾಂತರಿಸಿದರು. ಬಳಿಕ  ತಜ್ಞರು ಬಾಂಬ್ ನಿಷ್ಕ್ರಿಯಗೊಳಿಸಲು ಪ್ರಯತ್ನಿಸಿದರು. ವೈಯರ್ ಹಾಗೂ ಶೆಲ್‌ಗಳಿಂದ ಕೂಡಿದ್ದ ವಸ್ತುವನ್ನು ಸಿಬ್ಬಂದಿಗಳು ನಿಷ್ಕ್ರಿಯಗೊಳಿಸಿದ್ದಾರೆ. ಘಟನೆಯಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.

ಹೊಸ ವರ್ಷಾಚರಣೆಗೆ ಕೆಲವೇ ದಿನಗಳು ಬಾಕಿ ಇರುವಂತೆ  ಸಾಂಸ್ಕೃತಿಕ ನಗರಿಯಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಯತ್ನ ನಡೆಸಿದ್ದು, ಯತ್ನ ವಿಫಲವಾಗಿದೆ ಎನ್ನಲಾಗುತ್ತಿದೆ. ಪತ್ತೆಯಾಗಿರುವ ಸಂಶಯಾಸ್ಪದ ಬಾಕ್ಸ್ ನಲ್ಲಿ ಸ್ಫೋಟಕ್ಕೆ ಬಳಸುವ ವಸ್ತುಗಳು ಪತ್ತೆಯಾಗಿವೆ. ಜನನಿಬಿಡ ಪ್ರದೇಶವನ್ನೇ  ಗುರಿಯಾಗಿಸಿಕೊಂಡು ಬಾಂಬ್ ಇರಿಸಲಾಗಿತ್ತು. ಮೈಸೂರಿನ ಹೃದಯಭಾಗ ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗ ಬಾಂಬ್ ಇರಿಸಲಾಗಿದ್ದು, ಬಾಕ್ಸ್ ನಲ್ಲಿ 60 ಬ್ಯಾಟರಿ ಸೆಲ್ ಗಳು, ವಯರ್ ಗಳು  ಪತ್ತೆಯಾಗಿವೆ. ವಿಧ್ವಂಸಕ ಕೃತ್ಯಕ್ಕೆ ಮುಂದಾದ ದುಷ್ಕರ್ಮಿಗಳು ಟೈಮರ್ ಅಳವಡಿಸದೆ ಬಿಟ್ಟುಹೋಗಿದ್ದಾರೆ ಎನ್ನಲಾಗಿದೆ. ಆಟೋ ಹಾಗೂ ಕಾರು ಚಾಲಕರ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: