ಕರ್ನಾಟಕಮೈಸೂರು

ಕನ್ನಡ ಸಮ್ಮೇಳನದ ನೆಪದಲ್ಲಿ ಸರ್ಕಾರದ ಕೋಟ್ಯಾಂತರ ಹಣ ಗುಳುಂ

ನುಡು-ನುಡಿಗಾಗಿ ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ

ಮೈಸೂರು, ಡಿ. 20 : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಭಾಷೆ ಸೇರಿದಂತೆ ಕಾವೇರಿ, ಕಳಸ ಬಂಡೂರಿ ಶಾಶ್ವತ ಪರಿಹಾರ, ಶಾಶ್ವತಿ ಯೋಜನೆ, ಡಾ.ಸರೋಜಿನಿ ಮಹಿಷಿ ವರದಿ ಅನುಷ್ಠಾನ ವಿಷಯಗಳ. ಬಗ್ಗೆ  ಚರ್ಚೆ ನಡೆಯದೇ ಇರುವುದು ವಿಪರ್ಯಾಸವೆಂದು ಚಾಮರಾಜನಗರದ ಅಖಿಲ ಕರ್ನಾಟಕ ಕನ್ನಡ ಮಹಾಸಭಾ ರಾಜ್ಯಾಧ್ಯಕ್ಷ ಚಾ.ರಂ.ಶ್ರಿನಿವಾಸಗೌಡ ದೂರಿದರು.

ಸಮ್ಮೇಳನದಲ್ಲಿ ಹಿರಿಯ ಸಾಹಿತಿ ಡಾ.ಕಲ್ಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಬಗ್ಗೆ ಒಬ್ಬ ಸಾಹಿತಿಗಳು ಚಕಾರವೆತ್ತಿಲ್ಲ,  ಸರ್ಕಾರದ ಕೋಟ್ಯಾಂತರ ಹಣ ದುಂದು ವೆಚ್ಚ ಮಾಡಿ, ಮೂರು ದಿನಗಳ ಪೂರಿ, ಒಬ್ಬಟ್ಟು, ಕಜ್ಜಾಯ ತಿಂದು ಮನೆ ಸೇರುವುದೇ ಸಾಹಿತ್ಯ ಸಮ್ಮೇಳನದ ಹೆಗ್ಗಳಿಕೆ ಅಷ್ಟೇ, ಗಡಿ ಪ್ರದೇಶದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿದ್ದು ಈ ಬಗ್ಗೆ ಸಾಹಿತ್ಯ ಸಮ್ಮೇಳನದಲ್ಲಿ ಪ್ರಮಾಣಿಕ ಚರ್ಚೆ ನಡೆದಿಲ್ಲ. ಕೋಟ್ಯಾಂತರ ರೂಪಾಯಿ ಸಾರ್ವಜನಿಕರ ತೆರಿಗೆ ವ್ಯಯ್ಯವಾಯಿತೆ ಹೊರತು ನಾಡು ನುಡಿಗಾಗಿ ಯಾವುದೇ ಸಹಾಯವಾಗಿಲ್ಲ, ಇಂತಹ ಸಮ್ಮೇಳನ ಯಾವ ಪುರುಷಾರ್ಥಕ್ಕೆ ಎಂದು ವ್ಯಂಗ್ಯವಾಡಿದರು.

ಗಡಿನಾಡಿ ಚಾಮರಾಜನಗರ ಜಿಲ್ಲೆಯಲ್ಲಿ ಕನ್ನಡ ಜಾಗೃತಿ ಮೂಡಿಸಲು ಜನವರಿಯ ಕೊನೆಯ ವಾರದಲ್ಲಿ ಅಖಿಲ ಭಾರತ ಕನ್ನಡ ಸಮ್ಮೇಳನವನ್ನು ಆಯೋಜಿಸಿದ್ದು ಕನ್ನಡ ಕಟ್ಟಾಳು ವಾಟಾಳ್ ನಾಗರಾಜ್ ಅವರು ಸರ್ವಾಧ್ಯಕ್ಷರನ್ನಾಗಿ ಆಯ್ಕೆಯಾಗಿದ್ದು, ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ವಿಚಾರ ಸಂಕಿರಣ, ಕವಿಗೋಷ್ಠಿ, ಜಾನಪದ ಕಲಾತಂಡಗಳ ಮೆರವಣಿಗೆ, ಸಾಂಸ್ಕೃತಿಕ ಗೋಷ್ಠಿಗಳನ್ನು, ಸ್ಮರಣ ಸಂಚಿಕೆ ಬಿಡುಗಡೆ, ಜಾನಪದ ಕಲಾತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ನಡೆಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಿರಿಯ ಸಾಹಿತಿ ಬನ್ನೂರು ಕೆ.ರಾಜು ಮತನಾಡಿ, ಈಚೆಗೆ ಮೈಸೂರಿನಲ್ಲಿ ನಡೆದ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸ್ಥಳೀಯ ಕಸಾಪದ ದುರ್ವಾತನೆಯಿಂದ ಸಾಂಸ್ಕೃತಿಕ ನಗರಿ ಮೈಸೂರಿನ ಗರಿಮೆ ಮಣ್ಣು ಪಾಲಾಗಿದೆ. ಲಕ್ಷಾಂತರ ರೂಗಳನ್ನು ಊಟಕ್ಕೆ ವೆಚ್ಚವಾಗಿದೆ, ಆಂದ್ರೆ ಊಟಕ್ಕಾಗಿಯೇ ಸಮ್ಮೇಳನ ನಡೆಸಲಾಯಿತಾ ಎಂದು ವ್ಯಂಗ್ಯವಾಗಿ ಪ್ರಶ್ನಿಸಿ, ದುಡ್ಡು ಗಳಿಸುವುದಕ್ಕೆ ಸಮ್ಮೇಳನ ಮಾಡಲಾಗಿದೆ, ಸರ್ಕಾರದ ಅನುದಾನದಲ್ಲಿ ನಡೆಯುವ ನಕಲಿ ಆಚರಣೆಗೆ ಉತ್ತರ ನೀಡುವ ಸಲುವಾಗಿ ಸಮ್ಮೇಳನ ಆಯೋಜಿಸಿದ್ದು ಸಾಹಿತ್ಯ ಸಮ್ಮೇಳನದ ಎಲ್ಲಾ ಅಕ್ರಮದ ಪ್ರತ್ಯುತ್ತರವಾಗಿ ಸಮ್ಮೇಳನ  ನಡೆಸಲಾಗುವುದು ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಸಾಹಿತ್ಯ ಸಮ್ಮೇಳನ : ಮುಂದಿನ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಧಾರವಾಡದ ಬದಲಾಗಿ ಗಡಿ ಜಿಲ್ಲೆಗಳಾದ ಬೆಳಗಾವಿ, ಕೋಲಾರಗಳಲ್ಲಿ ಆಚರಿಸಿ ಕನ್ನಡವನ್ನು ಬಲಪಡಿಸುವ ಮೂಲಕ ಕನ್ನಡ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಬೇಕಿತ್ತು. ಅದರ ಹೊರತಾಗಿ ಕನ್ನಡ ಪರಿಷತ್ ರಾಜ್ಯಾಧ್ಯಕ್ಷ ಮನು ಬಳಿಗಾರ ಅವರ ಹುಟ್ಟುರಾದ ಧಾರವಾಡದಲ್ಲಿ ಸಮ್ಮೇಳನ ಆಯೋಜಿಸುವ ಮೂಲಕ ಸಮ್ಮೇಳನದ ಕೋಟ್ಯಾಂತರ ರೂ ಅನುದಾನವನ್ನು ಕೊಳ್ಳೆ ಹೊಡೆಯುವ ದುರುದ್ದೇಶವಿದೆ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿ, ಕನ್ನಡದ ಹಾಗೂ ಕನ್ನಡಿಗರ ರಕ್ಷಣೆಯೇ ಸರ್ಕಾರ ಧ್ಯೇಯವಾಗಬೇಕಿದೆ ಹೊರತು ಮತ ಲಾಭಿಗಾಗಿ ಸಮ್ಮೇಳನ ನಡೆಸುವುದು ತರವಲ್ಲವೆಂದು ಕಿವಿ ಮಾತು ಹೇಳಿದರು.

ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ಗೌಡ, ಮುಖಂಡ ಪಿ.ಶಾಂತಮೂರ್ತಿ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: