ಮೈಸೂರು

ವಿಶ್ವಕರ್ಮ ಸಮಾಜ ಮುಖಂಡರು ರಾಜಕೀಯವಾಗಿ ಬೆಳೆಯಬೇಕು : ಸಿ.ಹುಚ್ಚಪ್ಪಚಾರ್

ವಿಶ್ವಕರ್ಮ ಸಮಾಜ ರಾಜಕೀಯ-ಆರ್ಥಿಕವಾಗಿ ಹಿಂದಿದೆ. ಅದರಿಂದ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ.ಈ ಸಮಾಜವು ರಾಜ್ಯದ ಪ್ರಮುಖ ಸಮಾಜಗಳಲ್ಲಿ ಒಂದಾಗಿದ್ದು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಮೈಸೂರು ಜಿಲ್ಲಾ ವಿಶ್ವಕರ್ಮ ಮಹಾ ಒಕ್ಕೂಟದ ಅಧ್ಯಕ್ಷ ಸಿ.ಹುಚ್ಚಪ್ಪಚಾರ್ ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಕ್ಲಬ್ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ವಿಶ್ವಕರ್ಮ ಸಮಾಜ ವತಿಯಿಂದ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷೆ ಬಿ.ಪಿ.ಸತ್ಯವತಿ ಅವರಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಸತ್ಯವತಿ ಅವರನ್ನು ಅಭಿನಂದಿಸಿ ಮಾತನಾಡಿದ ಅವರು ಸರ್ಕಾರ ಸಮಾಜದ ಅಭಿವೃದ್ಧಿಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದರೂ ಸರ್ಕಾರದ ಯೋಜನೆಗಳು ಸಮಾಜದ ಜನರಿಗೆ ತಲುಪಲು ಸಾಧ್ಯವಾಗುತ್ತಿಲ್ಲ.  ಇದರಿಂದ ಸೂಕ್ತ ಸೌಲಭ್ಯವಿಲ್ಲದೆ ವಂಚಿತರಾಗಿದ್ದಾರೆ. ರಾಜಕೀಯ ಅಧಿಕಾರ ಇಲ್ಲದಿರುವುದೇ ಇದಕ್ಕೆ ಕಾರಣ.  ಸಮಾಜದ ಮುಖಂಡರು ರಾಜಕೀಯವಾಗಿ ಬೆಳೆಯಬೇಕು. ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸತ್ಯವತಿ ಅವರು, ಈಗಿರುವ ಬೈಲಾವನ್ನು ಕಾನೂನಾತ್ಮಕವಾಗಿ ತಿದ್ದುಪಡಿ ಮಾಡಿ ಸಮಾಜದ ಆರ್ಥಿಕ, ಸಾಮಾಜಿಕ ಸುಧಾರಣೆಗೆ ಪೂರಕವಾದಂತಹ ವಿನೂತನ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು.

ಅಭದ್ರತೆಯಲ್ಲಿ ಜೀವನ ಸಾಗಿಸುತ್ತಿರುವ  ವಿಶ್ವಕರ್ಮ ಸಮುದಾಯ ಕುಲಕಸುಬುಗಳನ್ನೇ ನಂಬಿದೆ.  ಬಲಿಷ್ಠ ಆರ್ಥಿಕತೆ ಇಲ್ಲದೇ ಕೆಲಸದ ವೇಳೆ ಅವಘಡ ಸಂಭವಿಸಿದರೆ ಇಲ್ಲವೆ ವಯೋಸಹಜ ಕಾಯಿಲೆಗೆ ತುತ್ತಾದರೂ ಸೂಕ್ತ ಚಿಕಿತ್ಸೆ ಇಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಆಘಾತಕ್ಕೊಳಗಾದ ವ್ಯಕ್ತಿಗೆ ವಿಮೆ ಸೌಲಭ್ಯ ಒದಗಿಸಬೇಕು. ಜೊತೆಗೆ ಮಕ್ಕಳ ಉನ್ನತ ಶಿಕ್ಷಣಕ್ಕೆ ಮತ್ತು ಜೀವನ ನಿರ್ವಹಣೆಗೆ ಸಾಲ ಸೌಲಭ್ಯ ನೀಡಬೇಕು ಎಂದು ಮನವಿ ಮಾಡಿದರು.

ರಾಜ್ಯ ನಿಗಮದ ನಿರ್ದೇಶಕ ಕೆ.ಸಿ.ಶ್ರೀನಿವಾಸ್, ಮಂಡ್ಯ ಜಿಲ್ಲಾ ನಿಗಮದ ನಿರ್ದೇಶಕ ಪ್ರಕಾಶ್, ವಿಶ್ವಕರ್ಮ ಸಮಾಜದ ಮುಖಂಡರಾದ ಎನ್.ಚಂದ್ರು, ಸಿ.ಟಿ.ಆಚಾರ್, ಮಹಿಳಾ ಅಧ್ಯಕ್ಷೆ ಶಾಂತಮ್ಮ ಮೈಸೂರು ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಜಯರಾಮಚಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: