ಮೈಸೂರು

ಚುನಾವಣೆ ಹಿನ್ನಲೆಯಲ್ಲಿ ಅಕ್ರಮ ಪಡಿತರ ಚೀಟಿ ವಿತರಣೆ : ಸಿಓಡಿ ತನಿಖೆಗೆ ಆಗ್ರಹ

ಮೈಸೂರು, ಡಿ. 20 : ಮುಂಬರುವ ವಿಧಾನಸಭಾ ಚುನಾವಣೆಯ ಮತ ಬ್ಯಾಂಕಿಗಾಗಿ ಯಾವುದೇ ಮಾನದಂಡವಿಲ್ಲದೇ ಸರ್ಕಾರ ಅಕ್ರಮವಾಗಿ ಹೊಸ ಪಡಿತರ ಚೀಟಿಗಳನ್ನು ವಿತರಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಸರ್ವಜನಾಂಗದ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ವೇಣುಗೋಪಾಲ್ ದೂರಿದರು.

ನಗರದಲ್ಲಿ 1 ಲಕ್ಷ 6 ಸಾವಿರ ಮನೆಗಳಿದ್ದು ಆದರೆ ಬಿಪಿಎಲ್ ಕಾರ್ಡ್ ಗಳ ಸಂಖ್ಯೆ ಕಳೆದ ನವೆಂಬರ್ ಗೆ 1 ಲಕ್ಷ 15 ಸಾವಿರ ದಾಟಿದೆ, ಇದರಿಂದ 400 ಕೋಟಿ ರೂಗಳು ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ. ಅಲ್ಲದೇ ಪಡಿತರ ಚೀಟಿ ಪರಿಶೀಲನೆಯನ್ನು ಗ್ರಾಮ ಲೆಕ್ಕಾಧಿಕಾರಿಗಳಿಗೆ ವಹಿಸಿದ್ದು ಕೆಲವೇ ರೂಪಾಯಿಗಳ ಲಂಚಕ್ಕೆ ಪಡಿತರ ಚೀಟಿ ನೀಡುತ್ತಿದ್ದು, ಅಕ್ರಮದಲ್ಲಿ ಆಹಾರ ಮತ್ತು ರೆವಿನ್ಯೂ ಇಲಾಖೆಗಳ ಅಧಿಕಾರಿಗಳ ಶಾಮೀಲಾಗಿದ್ದಾರೆ, ಈ ನ್ಯಾಯಬೆಲೆ ಅಂಗಡಿಗಳಲ್ಲಿ ಹೊಸ ಕಾರ್ಡುದಾರರಿಗೆ ಪಡಿತರ ನೀಡುವಲ್ಲಿ ಅವ್ಯವಹಾರ ನಡೆಸಲಾಗುತ್ತಿದೆ ಎಂದು ವೇದಿಕೆ ದೂರಿದೆ.

ಮೈಸೂರು ನಗರ ಒಂದರಲ್ಲೇ 15,000 ಪಡಿತರ ವಿತರಿಸಿದ್ದು, ನಿಜವಾದ ಬಡವರಿಗೆ ಶೇ. 25ರಷ್ಟೂ ಸಿಗದೆ ಉಳ್ಳವರಿಗೆ ಕಾರ್ಡುಗಳನ್ನು ನೀಡಲಾಗಿದೆ. ಇದರಿಂದ ಬಡವರಿಗೆ ಅನ್ಯಾಯವಾಗುತ್ತಿದ್ದು, ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗಿದೆ. ಈ ಕಾರ್ಡುಗಳನ್ನು ಆಹಾರ ಇಲಾಖೆ ಯಾವ ಮಾನದಂಡದ ಆಧಾರದ ಮೇಲೆ ವಿತರಿಸಿದೆ ಎಂಬುದು ಪ್ರಶ್ನೆಯಾಗಿದೆ. ಅಲ್ಲದೇ ಆಹಾರ ಧಾನ್ಯ ವಿತರಣೆಯಲ್ಲೂ ಸಾಕಷ್ಟು ಅವ್ಯವಹಾರಗಳು ನಡೆಯುತ್ತಿದ್ದು ತೀರ ಕಳಪೆ ಗುಣಮಟ್ಟದ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ. ಈ ಬಗ್ಗೆ ಸಿಓಡಿ ತನಿಖೆ ನಡೆಸಲು ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ವೇದಿಕೆ ಕೆ.ಆರ್.ನಗರದ ಅಧ್ಯಕ್ಷ ನಿಂಗೇಗೌಡ, ಎನ್‌.ಆರ್.ಕ್ಷೇತ್ರದ ಅಧ್ಯಕ್ಷ ಅಕ್ರಮ್ ಪಾಷಾ, ಕೆ.ಆರ್.ಕ್ಷೇತ್ರದ ಅಧ್ಯಕ್ಷ ಎಲ್.ಮಹದೇವಪ್ಪ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: