ಕರ್ನಾಟಕಮೈಸೂರು

ಸುಪ್ರೀಂಕೋರ್ಟ್‍ನಲ್ಲಿ ಪ್ರಬಲ ವಾದ ಮಂಡಿಸಿಲ್ಲ: ರಾಜ್ಯ ಸರ್ಕಾರದ ವಿರುದ್ಧ ಎಚ್‍ಡಿಕೆ ವಾಗ್ದಾಳಿ

ಕರ್ನಾಟಕಕ್ಕೆ ಕುಡಿಯುವ ನೀರಿಗೂ ತತ್ವಾರ ಬಂದಿರುವ ಸಂದರ್ಭದಲ್ಲಿ ತಮಿಳುನಾಡಿಗೆ ಪ್ರತಿದಿನ 15 ಸಾವಿರ ಕ್ಯೂಸೆಕ್ಸ್ ಕಾವೇರಿ ನೀರು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್‍ನಲ್ಲಿ ಒಪ್ಪಿಕೊಂಡಿರುವ ರಾಜ್ಯ ಸರ್ಕಾರದ ನಿಲುವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್‍.ಡಿ. ಕುಮಾರಸ್ವಾಮಿ ಅವರು ತೀವ್ರವಾಗಿ ಖಂಡಿಸಿದರು.

ಮೈಸೂರಿನಲ್ಲಿ ಬುಧವಾರ ಪತ್ರಿಗೋಷ್ಠಿ ನಡೆಸಿ ಮಾತನಾಡುತ್ತಿದ್ದ ಅವರು, ಕರ್ನಾಟಕದ ರೈತರಿಗೆ ಕೃಷಿ ಚಟುವಟಿಕೆಗಳಿಗೆ ನೀರು ಕೊಡಲು ಸಾಧ್ಯವಿಲ್ಲ ಎಂದು ಪ್ರಕಟಿಸಿರುವ ರಾಜ್ಯ ಸರ್ಕಾರ, ತಮಿಳುನಾಡು ಕೃಷಿಗೆ ನೀರಿನ ಬೇಡಿಕೆ ಇಟ್ಟಾಗ ನ್ಯಾಯಾಲಯದಲ್ಲಿ ನಿರಾಕರಿಸುವ ಅವಕಾಶವಿತ್ತು. ಈ ಅವಕಾಶವನ್ನು ಕೈಚೆಲ್ಲಿರುವ ರಾಜ್ಯ ಸರ್ಕಾರದ ಪರ ವಕೀಲರು, ಮಳೆಯಾಗದಿದ್ದರೆ ಕರ್ನಾಟಕದ ಜನತೆಗೆ ಕುಡಿಯುವ ನೀರು ಪೂರೈಸುವ ಖಾತ್ರಿಯನ್ನೂ ನೀಡಿಲ್ಲ ಎಂದು ಟೀಕಿಸಿದರು.

ನಿಯಮಗಳ ಪ್ರಕಾರ ಕುಡಿಯುವ ನೀರಿನ ಅಗತ್ಯತೆಗೆ ಮೊದಲ ಆದ್ಯತೆ ನೀಡಬೇಕು. ಈ ವಿಚಾರವನ್ನು ಸುಪ್ರೀಂಕೋರ್ಟ್‍ನಲ್ಲಿ ರಾಜ್ಯದ ವಕೀಲರು ಸರಿಯಾಗಿ ಪ್ರತಿಪಾದಿಸಿಲ್ಲ. ಜೊತೆಗೆ ರಾಜ್ಯದ ರೈತರ ಕೃಷಿ ಚಟುವಟಿಕೆಗಳ ಕುರಿತು ಸರಿಯಾದ ಯೋಜನೆ ತಯಾರಿಸದೆ ರಾಜ್ಯ ಸರ್ಕಾರ ಬೇಜವಾಬ್ದಾರಿತನದಿಂತ ವರ್ತಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಪ್ರತಿಭಟನೆ ವೇಳೆ ಹುಚ್ಚಾಟ ಬೇಡ: ಕಾವೇರಿ ತೀರ್ಪು ವಿರೋಧಿಸಿ ಪ್ರತಿಭಟನೆ ನಡೆಸುವ ವೇಳೆ ಸಾರ್ವಜನಿಕರು ಹುಚ್ಚಾಟ ಪ್ರದರ್ಶಿಸಬಾರದು. ನಮ್ಮ ಮನೆಯ ಆಸ್ತಿ ಹಾಳು ಮಾಡಿಕೊಂಡರೆ ಜಯಲಲಿತಾಗೆ ಅಥವಾ ಆಡಳಿತ ವರ್ಗಕ್ಕೆ ಕನಿಕರ ಬರುವುದಿಲ್ಲ. ಟಿವಿಯಲ್ಲಿ ನಾನು ಇಂದು ಕೆಲವು ಪ್ರತಿಭಟನೆ ನಿರತ ವ್ಯಕ್ತಿಗಳ ಹುಚ್ಚಾಟ ಗಮನಿಸಿದ್ದೇನೆ,  ಬಡ ವ್ಯಾಪಾರಿಯೊಬ್ಬನ ಸಣ್ಣ ಅಂಗಡಿ ಮುಂದಿದ್ದ ಪುರಿಮೂಟೆಯನ್ನು ಎತ್ತಿ ಎರಚಾಡುವ ದೃಶ್ಯಗಳು ಕಂಡುಬಂದಿದೆ. ಇಂತಹ ಹುಚ್ಚಾಟಗಳಿಂದ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಬದಲಾಗಿ ಶಾಂತಿಯುತ ಕಾನೂನಾತ್ಮಕ ಹೋರಾಟದ ಮೂಲಕ ನ್ಯಾಯ ಪಡೆಯಬಹುದಷ್ಟೆ ಎಂದು ಕಿವಿಮಾತು ಹೇಳಿದರು.

ಸರ್ವಪಕ್ಷ ಸಭೆಗೆ ಹೋಗದ್ದಕ್ಕೆ ಸಬೂಬು: ರಾಜ್ಯ ಸರ್ಕಾರದ ನಿಲುವಿನ ಬಗ್ಗೆ ಸೂಚನೆ ಇದ್ದದ್ದರಿಂದ ಮೊನ್ನೆ ನಡೆದ ಸರ್ವಪಕ್ಷ ಸಭೆಗೆ ನಾನು ಹಾಜರಾಗಿರಲಿಲ್ಲ ಎಂದು ಕುಮಾರಸ್ವಾಮಿ ಅವರು ಸಬೂಬು ಹೇಳಲು ಪ್ರಯತ್ನಿಸಿದರು.

ಮಗನ ಸಿನಿಮಾ ಮುಖ್ಯವಲ್ಲ; ಮಂಡ್ಯ ತಲುಪಲಾಗಲಿಲ್ಲ: ಕುಮಾರಸ್ವಾಮಿ ಅವರು ಕಾವೇರಿ ವಿಷಯ ನಿರ್ಲಕ್ಷಿಸಿ ಮಗನ ಸಿನಿಮಾ ತಯಾರಿಯಲ್ಲಿ ತೊಡಗಿದ್ದಾರೆ ಎಂದು ಕೆಲವರು ಟೀಕಿಸಿದ್ದಾರೆ. ಆದರೆ ನನ್ನ ಮಗನ ಸಿನಿಮಾಗೆ ಎಲ್ಲ ತಯಾರಿ ಮುಗಿದಿದೆ. ಪ್ರತಿಭಟನಾ ನಿರತರು ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿದ್ದರಿಂದ ನನಗೆ ಮಂಡ್ಯ ತಲುಪಲು ಸಾಧ್ಯವಾಗಲಿಲ್ಲವಷ್ಟೆ ಎಂದು ಸಮಜಾಯಿಷಿ ನೀಡಿದರು.

ಮಂಡ್ಯ ಜಿಲ್ಲೆ ಅಧಿಕಾರಿಗಳ ಗೋಸುಂಬೆತನ: ಕಾವೇರಿ ಅಚ್ಚುಕಟ್ಟು ಪ್ರದೇಶದ ಮಂಡ್ಯ ರೈತರ ಕೃಷಿಚಟುವಟಿಕೆಗಳಿಗೆ ನೀರು ಒದಗಿಸುವ ವಿಷಯದಲ್ಲಿ ಮಂಡ್ಯ ಜಿಲ್ಲೆಯ ಅಧಿಕಾರಿಗಳು ಮೊದಲಿನಿಂದಲೂ ಗೋಸುಂಬೆತನ ಪ್ರದರ್ಶಿಸುತ್ತಿದ್ದಾರೆ. ಬೆಳೆ ಒಡ್ಡುವ ಕುರಿತು ಯೋಜನೆ ತಯಾರಿಸಿ ಮಾಹಿತಿ ನೀಡಬೇಕಿದ್ದ ಜಿಲ್ಲಾಡಳಿತ ಈ ಕುರಿತು ನಿರ್ಲಕ್ಷ್ಯ ವಹಿಸಲು ಕಾರಣವೇನು ಎಂದು ಪ್ರಶ್ನಿಸಿದರು.

ತೀವ್ರ ಟೀಕೆಗಳು ವ್ಯಕ್ತವಾದ ನಂತರ ಸಭೆ ಕರೆದಿರುವ ಜಿಲ್ಲಾಡಳಿತವು ನಾಮಕಾವಸ್ತೆ ಸಭೆ ನಡೆಸಿ ಬೆಳೆಗಳಿಗೆ ನೀರು ಕೊಡಲು ಸಾಧ್ಯವಿಲ್ಲ ಎಂದು ಪ್ರಕಟಿಸಿದೆ. ನಮ್ಮ ರೈತರಿಗೆ ನೀರು ಕೊಡದೆ, ಕುಡಿಯುವ ಅಗತ್ಯಕ್ಕೂ ನೀರು ಉಳಿಸಿಕೊಳ್ಳದೆ ತಮಿಳುನಾಡು ರೈತರ ಬೆಳೆಗಳಿಗೆ ನೀರು ಕೊಡಲು ಸುಪ್ರೀಂ ಕೋರ್ಟ್‍ನಲ್ಲಿ ಒಪ್ಪಿಕೊಂಡಿರುವ ರಾಜ್ಯ ಸರ್ಕಾರದ ಬೇಜವಾಬ್ದಾರಿತನದಿಂದ ರಾಜ್ಯದ ಜನತೆಗೆ ಅನ್ಯಾಯವಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

 25 ರಂದು ಮಂಡ್ಯದಲ್ಲಿ ಪ್ರತಿಭಟನೆ: ಇದೇ ಸೆ. 25ರಂದು ಕಾವೇರಿ ತೀರ್ಪು ವಿರೋಧಿಸಿ ಹಾಗೂ ರಾಜ್ಯ ಸರ್ಕಾರದ ನಿಲುವು ಖಂಡಿಸಿ ಮಂಡ್ಯದಲ್ಲಿ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಪಕ್ಷವು ಕಾವೇರಿ ವಿವಾದದ ವಿಚಾರದಲ್ಲಿ ಪ್ರತಿಯೊಂದು ಹಂತದಲ್ಲೂ ಸೂಕ್ಷ್ಮ ಅವಲೋಕನ ಕೈಗೊಂಡಿದ್ದು, ಪಕ್ಷದ ವತಿಯಿಂದ ಹೋರಾಟದ ರೂಪರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಪುಟ್ಟರಾಜುಗೆ ಮಾಹಿತಿ ಇದೆ: ಮಂಡ್ಯ ಸಂಸದ ಪುಟ್ಟರಾಜು ಅವರಿಗೆ ಕಾವೇರಿ ವಿವಾದದ ವಿಷಯದಲ್ಲಿ ಪಕ್ಷದ ನಿಲುವಿನ ಕುರಿತು ಸಂಪೂರ್ಣ ಮಾಹಿತಿ ಸ್ಪಷ್ಟಪಡಿಸಿದ್ದೇವೆ. ಸೂಕ್ತ ಸಂದರ್ಭದಲ್ಲಿ ಅವರು ಈ ಕುರಿತು ಮಾತನಾಡಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ, ಕೆ.ಆರ್. ನಗರ ಶಾಸಕ ಸಾ.ರಾ. ಮಹೇಶ್, ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್, ಮೈಸೂರು ಮೇಯರ್ ಬಿ.ಎಲ್. ಭೈರಪ್ಪ, ಮೈಸೂರಿನ ಮಾಜಿ ಮೇಯರ್‍^ಗಳಾದ ಸಂದೇಶ್ ಸ್ವಾಮಿ, ಆರ್. ಲಿಂಗಪ್ಪ, ಚಾಮರಾಜ ಜೆಡಿಎಸ್ ಮುಖಂಡ ಹರೀಶ್ ಗೌಡ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಕೆ.ಆರ್. ನಗರ ಪುರಸಭೆ ಉಪಾಧ್ಯಕ್ಷೆ ಜೆಡಿಎಸ್ ಸೇರ್ಪಡೆ: ಇದೇ ಸಂದರ್ಭದಲ್ಲಿ ಕೆ.ಆರ್. ನಗರ ಪುರಸಭೆ ಉಪಾಧ್ಯಕ್ಷೆಯಾದ ಕಾಂಗ್ರೆಸ್‍ನ ಕವಿತಾ ವಿಜಯಕುಮಾರ್ ಅವರನ್ನು ಜೆಡಿಎಸ್‍ ಪಕ್ಷಕ್ಕೆ ಸ್ವಾಗತಿಸಲಾಯಿತು.

Leave a Reply

comments

Related Articles

error: