
ಮೈಸೂರು
ಹಾಡಿ ಜನರಿಗೆ ಕುಡಿಯಲು ಶುದ್ಧ ನೀರು ಒದಗಿಸಿ: ಎಂ.ಟಿ. ಮಧು ಕುಮಾರ್
ಬೈಲಕುಪ್ಪೆ: ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಗಿರಿಜನರಿಗೆ ಕುಡಿಯುವ ನೀರಿಲ್ಲದೆ ನೆಲಬಾವಿಯಲ್ಲಿನ ಕೊಳೆತ ಹುಳುಮಿಶ್ರಿತ ನೀರನ್ನು ಜನರು ಕುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹುಣಸೂರು ಲ್ಯಾಂಪ್ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಂ.ಟಿ. ಮಧು ಕುಮಾರ್ ಆರೋಪಿಸಿದ್ದಾರೆ.
ತಾಲೂಕಿನ ಮರಳುಕಟ್ಟೆ ಗಿರಿಜನ ಎ.ಹಾಡಿಯಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದ್ದು ಮುತ್ತೂರು ಗ್ರಾಪಂ ಅಭಿವೃದ್ದಿ ಅಧಿಕಾರಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.
ಈ ಹಾಡಿಯಲ್ಲಿ 60 ಕ್ಕೂ ಹೆಚ್ಚು ಕುಟುಂಬವಿದ್ದು 300ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಈ ಜನರಿಗಾಗಿ ಪಂಚಾಯಿತಿ ವತಿಯಿಂದ ಕಿರುನೀರು ಯೋಜನೆಯಡಿಯಲ್ಲಿ ಕಳೆದ 8 ವರ್ಷಗಳ ಹಿಂದೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗಿದೆ. ಆದರೆ ಇದರ ಸೌಲಭ್ಯಕ್ಕಾಗಿ ವಿದ್ಯುತ್ ಸಂಪರ್ಕ ನೀಡಿರುವ ಟ್ರಾನ್ಸ್ಫಾರ್ಮರ್ ನಿಂದ ಅಧಿಕ ಕೊಳವೆ ಬಾವಿಗಳಿಗೆ ಸಂಪರ್ಕ ನೀಡಿರುವುದರಿಂದ ಪ್ರತಿನಿತ್ಯವೂ ಟ್ರಾನ್ಸ್ಫಾರ್ಮರ್ ಸುಟ್ಟು ನಾಶವಾಗುತ್ತಿರುವುದರಿಂದ ಸೆಸ್ಕ್ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಇದರಿಂದ ಗಿರಿಜನರಿಗೆ ಪ್ರತ್ಯೇಕವಾಗಿ ಟ್ರಾನ್ಸ್ಫಾರ್ಮರ್ ಅಳವಡಿಸಲು ಪಂಚಾಯಿತಿಗೆ ಹಣ ಕಟ್ಟಲು ಅನೇಕ ಬಾರಿ ಹೇಳಲಾಗಿದ್ದರೂ ಹಣ ಕಟ್ಟದೆ ಬೇಜವಾಬ್ದಾರಿ ತೋರುತ್ತಿರುವುದರಿಂದ ಸೆಸ್ಕ್ ಅಧಿಕಾರಿಗಳು ವಿದ್ಯುತ್ ಸಂಪರ್ಕವನ್ನು ತೆಗೆದು ಹಾಕಿದ್ದಾರೆ.
ಈ ಸಮಸ್ಯೆ ಕಳೆದ 2 ವರ್ಷಗಳಿಂದ ಕಾಡುತ್ತಿದ್ದರೂ ಯಾರೂ ಸಹ ಗಮನ ಹರಿಸದೇ ಇರುವುದರಿಂದ ಕೃಷಿ ಇಲಾಖೆಯ ವತಿಯಿಂದ ದನಕರುಗಳಿಗೆ ಕುಡಿಯುವ ನೀರಿಗಾಗಿ ಕೃಷಿ ಹೊಂಡವನ್ನು ತೋಡಿಸಲಾಗಿದೆ.
ಮಳೆಯಿಲ್ಲದೆ ಬರ ಆವರಿಸಿರುವ ಹಿನ್ನೆಲೆಯಲ್ಲಿ ಈ ಕೃಷಿ ಹೊಂಡದಲ್ಲಿ ನೀರು ಬತ್ತಿಹೋಗಿದ್ದು ಈ ಗುಂಡಿಯ ಒಳಗೆ ಇನ್ನೊಂದು ಆಳವಾದ ಗುಂಡಿಯನ್ನು ತೋಡಿಕೊಂಡು ಈ ಗುಂಡಿಯಲ್ಲಿ ಬಂದ ಜಲದಿಂದ ಸಂಗ್ರಹವಾದ ನೀರಿಗೆ ಮರದ ಎಲೆಗಳು ಸೇರಿದಂತೆ ಇನ್ನಿತರ ತ್ಯಾಜ್ಯ ವಸ್ತುಗಳು ಮಿಶ್ರವಾಗಿ ಕೊಳೆತು ಹುಳುಮಿಶ್ರಿತ ನೀರನ್ನೇ ಕುಡಿಯಬೇಕಾಗಿದೆ.
ಇದರಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಇಲ್ಲಿನ ನಿವಾಸಿಗಳು ಅನಾರೋಗ್ಯದಿಂದ ತತ್ತರಿಸುತ್ತಿದ್ದು ಕೂಡಲೇ ಜಿಲ್ಲಾಧಿಕಾರಿಗಳು ಗಮನ ಹರಿಸಿ ಈ ಸಮಸ್ಯೆಯನ್ನು ಪರಿಹರಿಸುವಂತೆ ಮಧು ಕುಮಾರ್ ಮನವಿ ಮಾಡಿಕೊಂಡಿದ್ದಾರೆ.