ಕರ್ನಾಟಕಮೈಸೂರುಸಿಟಿ ವಿಶೇಷ

ಮೂವರ ಕೆಲಸವನ್ನಿಲ್ಲಿ ಮಾಡೋರು ಒಬ್ಬರೇ..! ಸರ್ಕಾರಕ್ಕಿಲ್ಲ ಕಾಳಜಿ: ಕಷ್ಟದ ನಡುವೆಯೂ ರೂಪುಗೊಳ್ಳುತ್ತಿದೆ ಹೊಸ ಯೋಜನೆ

1ಸೋಮವಾರವಷ್ಟೇ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಆದರೆ ಈ ಮಧ್ಯೆಯೇ ಗ್ರಂಥಾಲಯ ಇಲಾಖೆಯ ದೊಡ್ಡ ಸಮಸ್ಯೆಯನ್ನು “ಸಿಟಿಟುಡೆ” ಬಿಚ್ಚಿಡಲಿದೆ. ರಾಜ್ಯವ್ಯಾಪಿ ಸರ್ಕಾರಿ ಸೇವೆಗಳ ಶೇಕಡಾ 4ರಷ್ಟು ಕೆಲಸ ಖಾಲಿ ಇರುವ ಅಂಶ ಬೆಳಕಿಗೆ ಬಂದಿದೆ. ಈ ಪೈಕಿ ಪೊಲೀಸ್ ಇಲಾಖೆ ಅರ್ಜಿ ಕರೆದು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.

ಆದರೆ ಇತರೆ ಸರ್ಕಾರಿ ಸಂಸ್ಥೆಗಳ ಗೋಳು ಮಾತ್ರ ಹೇಳತೀರದಾಗಿದೆ. ಏಕೆಂದರೆ ಮೂವರು ಮಾಡುವ ಕೆಲಸವನ್ನು ಇಲ್ಲಿ ಒಬ್ಬರೇ ಮಾಡುವಂತಾಗಿದ್ದು, ಇದು ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲೇ ದೊಡ್ಡ ತಲೆನೋವಾಗಿದೆ.

ಸಿಎಂ ತವರು ಜಿಲ್ಲೆಯಲ್ಲೇ ಶೇ. 40 ರಷ್ಟು ಹುದ್ದೆ ಖಾಲಿ

ಸಿಎಂ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿನಲ್ಲೇ ಶೇಕಡಾ 40ರಷ್ಟು ಹುದ್ದೆಗಳು ಖಾಲಿ ಇವೆ. ಅಂದರೆ ನಗರದಲ್ಲಿರುವ 31 ಹುದ್ದೆಗೆ ಕಾರ್ಯ ನಿರ್ವಹಿಸುತ್ತಿರೋದು ಕೇವಲ 16 ಮಂದಿ ಮಾತ್ರ. ಇನ್ನು ಜಿಲ್ಲಾ ಮಟ್ಟದಲ್ಲಿ ಶೇ 40ರಷ್ಟು ಹುದ್ದೆ ಖಾಲಿ ಇದ್ದು, ಎಲ್ಲರೂ ಡಬಲ್ ವರ್ಕ್ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ನಾವು ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆದು 8 ತಿಂಗಳುಗಳೇ ಕಳೆದಿವೆ. ಮೈಸೂರು ಮಾತ್ರವಲ್ಲ. ಹೊರ ಜಿಲ್ಲೆಗಳಲ್ಲೂ ಕೂಡ ಇದೇ ಸಮಸ್ಯೆಯಿದೆ. ಸಿಬ್ಬಂದಿಗಳು ಸೇರಿದಂತೆ ಉಪನಿರ್ದೇಶಕರು ಕೂಡ ಡಬಲ್ ಕೆಲಸ ಮಾಡುತ್ತಿದ್ದಾರೆ. ಆದರೆ ಇದು ಇವರಿಗೆ ನಿತ್ಯವೂ ಮಾನಸಿಕ ಹಿಂಸೆಗೆ ಒಳಗಾಗುವಂತೆ ಮಾಡಿದೆ.

ಗುತ್ತಿಗೆ ಆಧಾರದ ಮೇಲಾದರೂ ಕೆಲಸಕ್ಕೆ ಸೇರಿಸಿಕೊಳ್ಳಿ

ಇನ್ನು ಸಿಬ್ಬಂದಿಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆಯಲು ಕೂಡ ಸರ್ಕಾರ ಸಾಧ್ಯವಿಲ್ಲ ಎಂದಿದೆಯಂತೆ. ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳನ್ನು ಭರ್ತಿ ಮಾಡಿದರೆ ನಂತರ ಅವರು ಕೆಲಸ ಖಾಯಂ ಮಾಡುವಂತೆ ಒತ್ತಾಯ ಮಾಡುತ್ತಾರೆ ಎನ್ನುವ ಭೀತಿ ಸರ್ಕಾರಕ್ಕಿದೆ. ಇದರಿಂದಾಗಿ ದಿನಕ್ಕೆ ಇಂತಿಷ್ಟು ಎಂದು ಗೌರವ ಧನ ನೀಡುವ ಮೂಲಕ ಸಿಬ್ಬಂದಿಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ. ಆದರೆ ಅರೆ-ಬರೆ ಹಣ ನೀಡಿ, ಡಬಲ್ ಕೆಲಸ ಮಾಡಿಸಿಕೊಳ್ಳುತ್ತಾರೆಂದು ನಿತ್ಯವೂ ಇಲ್ಲಿನ ಸಿಬ್ಬಂದಿಗಳು ತಮ್ಮ ನೋವನ್ನು ಹೊರಹಾಕಿದ್ದಾರೆ. ಹೆಸರು ಹೇಳಲಿಚ್ಛಿಸದ ಮಹಿಳೆಯೊಬ್ಬರು ಸರ್ ನಮಗೆ ಇಲ್ಲಿಯೇ ಗುತ್ತಿಗೆ ಆಧಾರದ ಮೇಲಾದರೂ ಕೆಲಸಕ್ಕೆ ಸೇರಿಸಿಕೊಂಡರೇ ಸಂಬಳ ಸ್ವಲ್ಪ ಹೆಚ್ಚಾಗಿ ಬರುತ್ತದೆ. ಸರ್ಕಾರ ಇದನ್ನಾದ್ರೂ ಮಾಡಿದರೆ ನಮ್ಮ ಜೀವನ ಚೆನ್ನಾಗಿರುತ್ತೆ ಅಂತಾರೆ.

ಅಧಿಕಾರಿಗಳ ಹುದ್ದೆಯೂ ಖಾಲಿ

ಜಿಲ್ಲೆಯಾದ್ಯಂತ 256 ಗ್ರಂಥಾಲಯಗಳಿವೆ. ಆದರೆ ಇಲ್ಲೆಲ್ಲ ಸಿಬ್ಬಂದಿಗಳು ಮಾತ್ರವಲ್ಲ, ಶೇಕಡ 30 ರಷ್ಟು ಅಧಿಕಾರಿಗಳ ಹುದ್ದೆಗಳೂ ಖಾಲಿ ಇವೆ. ಗ್ರಂಥಾಲಯವೊಂದಕ್ಕೆ ಸಹವರ್ತಿಗಳು ಇರ್ತಾರೆ. ಅವರೆಲ್ಲ ಗೌರವ ಧನದ ಮೇಲೆ ಬಂದಿರುವ ಸಿಬ್ಬಂದಿಗಳೇ. ಆದರೆ ಇವರೆಲ್ಲರಿಗೂ ಅಂದರೆ, ನಗರ, ಜಿಲ್ಲೆ, ತಾಲೂಕು ಮಟ್ಟದಲ್ಲಿಯೂ ಒಬ್ಬರೇ ನಿರ್ದೇಶಕರು ಎಂಬಂತೆ ಎಲ್ಲವೂ ಉಪನಿರ್ದೇಶಕರಾದ ಮಂಜುನಾಥ್ ಅವರ ಹೆಗಲಿಗೆ ಬಿದ್ದಿದೆ. ನಾವು ಸರ್ಕಾರದ ಕೆಲಸ ದೇವರ ಕೆಲಸ ಎಂದು ನಂಬಿರುವವರು. ಅದಕ್ಕಾಗಿಯೇ ಕೆಲಸ ಹೆಚ್ಚಿದ್ದರೂ ಕೂಡ ನಾವೇ ಜವಾಬ್ದಾರಿ ತೆಗೆದುಕೊಂಡು ನಿರ್ವಹಿಸುತ್ತಿದ್ದೇವೆ. ಸರ್ಕಾರದ ಪ್ರತಿಕ್ರಿಯೆಗೆ ಎದುರು ನೋಡುತ್ತಿದ್ದೇವೆ. ಶೀಘ್ರವಾಗಿ ಹುದ್ದೆ ಭರ್ತಿಯಾಗುವಂತೆ ಸಿಎಂ ಅವರ ಬಳಿ ನಾನೂ ಕೂಡ ಮನವಿ ಮಾಡುತ್ತೇನೆಂದು ಗ್ರಂಥಾಲಯ ಇಲಾಖೆ ಉಪನಿರ್ದೇಶಕರಾದ ಮಂಜುನಾಥ್  ಅವರು “ಸಿಟಿಟುಡೆ”ಗೆ ತಿಳಿಸಿದರು.

library-web-2
ಮಂಜುನಾಥ್, ಗ್ರಂಥಾಲಯ ಇಲಾಖೆ ಉಪನಿರ್ದೇಶಕರು

ಜನಪ್ರತಿನಿಧಿಗಳ ಕೈಯಲ್ಲೂ ಆಗಿವೆ ಸಹಾಯ

ಇನ್ನು ಚಾಮರಾಜ ಕ್ಷೇತ್ರದ ಶಾಸಕರಾದ ಹೆಚ್. ವಾಸು ಅವರು ಹೆಬ್ಬಾಳದಲ್ಲಿ ನಿರ್ಮಾಣವಾದ ಗ್ರಂಥಾಲಯಕ್ಕೆ 25 ಲಕ್ಷ ರೂ. ಹಣವನ್ನು ಶಾಸಕರ ನಿಧಿಯಿಂದ ನೀಡಿದ್ದಾರೆ. ಇವರೊಟ್ಟಿಗೆ ಬಿಜೆಪಿ ಮುಖಂಡ ಗೋ. ಮಧುಸೂದನ್ ಅವರು ಕೂಡ ಇ-ಗ್ರಂಥಾಲಯಕ್ಕೆ ಪ್ರೋತ್ಸಾಹಧನ ನೀಡಿದ್ದಾರೆ. ಇನ್ನು ಕೆ.ಆರ್. ನಗರ ಶಾಸಕರಾದ ಸಾ.ರಾ. ಮಹೇಶ್ ಅವರು 10 ಲಕ್ಷ ರೂ. ಹಾಗೂ ಮಂಡ್ಯ ಸಂಸದರಾದ  ಪುಟ್ಟರಾಜು ಅವರು 10 ಲಕ್ಷ ರೂ. ಗ್ರಂಥಾಲಯಗಳ ಅಭಿವೃದ್ಧಿಗಾಗಿ ಹಣ ನೀಡುತ್ತೇನೆಂದು ಭರವಸೆ ನೀಡಿದ್ದಾರಂತೆ.

ಕಷ್ಟದಲ್ಲಿಯೂ ಮಾಡಿದ್ದಾರೆ ಅಭಿವೃದ್ಧಿಗಾಗಿ ನ್ಯೂ ಪ್ಲಾನ್

ಮೂವರ ಕೆಲಸ ಈಗ ಒಬ್ಬರೇ ಮಾಡುತ್ತಿರುವ ಇಂತಹ ಸಂದರ್ಭದಲ್ಲಿ ನೂತನವಾದ ಯೋಜನೆಗಳ ಅನುಷ್ಠಾನಕ್ಕೆ ಸಿದ್ಥತೆ ನಡೆಯುತ್ತಿದೆ. ಈ ಮಾಹಿತಿ ಎಕ್ಸ್ ಕ್ಲೂಸೀವ್ ಆಗಿ “ಸಿಟಿಟುಡೆ”ಗೆ ಸಿಕ್ಕಿದ್ದು ಮಾಹಿತಿಗಳು ಇಲ್ಲಿವೆ.

  • ನೂತನವಾಗಿ ಮೈಸೂರಿನಾದ್ಯಂತ 40 ಗ್ರಂಥಾಲಯ ತೆರೆಯಲು ಯೋಜನೆ ಸಿದ್ದ.
  • ಗ್ರಂಥಾಲಯ ಇಲಾಖೆಗೆ ಸಂಬಂಧಪಟ್ಟಂತೆ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ್ಲಿ ಉತ್ತೀರ್ಣಗೊಂಡವರನ್ನು ಒಂದು ವರ್ಷದ ಅವಧಿಗೆ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡುವುದು.
  • ತಿಂಗಳಿಗೆ ಈ ಕಲಿಕಾ ವಿದ್ಯಾರ್ಥಿಗಳಿಗೆ ಮೂರು ಸಾವಿರದ ಸ್ಟೈಫಂಡ್ ನೀಡುವಿಕೆ.
  • ಮೇಯರ್ ಸಭೆಯಲ್ಲಿ ನೂತನ ಕಟ್ಟಡಕ್ಕೆ ಅಸ್ತು.
  • 40 ಕಟ್ಟಡದಲ್ಲಿ 20 ಗ್ರಂಥಾಲಯ ನಿರ್ಮಾಣಕ್ಕೆ ಜಾಗ ಫಿಕ್ಸ್.
  • ಐದು ಕೋಟಿ ವೆಚ್ಚದಲ್ಲಿ ಹೈಟೆಕ್ ಗ್ರಂಥಾಲಯವನ್ನು ಮೈಸೂರಿನ ಸಬರನ್ ಬಸ್ ನಿಲ್ದಾಣದ ಬಳಿ ಇರುವ ಪೀಪಲ್ಸ್ ಪಾರ್ಕ್ ಬಳಿ ನಿರ್ಮಿಸಲು ಸಿದ್ದತೆ.

ಗ್ರಂಥಾಲಯದ ಸಾಧನೆ

  • ಮೈಸೂರಿನ ಕೇಂದ್ರ ಗ್ರಂಥಾಲಯ ರಾಜ್ಯದಲ್ಲೇ 12 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಮೊದಲ ಗ್ರಂಥಾಲಯಗಳ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
  • ಬಯೋಮೆಟ್ರಿಕ್ ಪದ್ದತಿಯನ್ನು ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಮೊದಲಿಗೆ ಅಳವಡಿಸಿದ ಕೀರ್ತಿ.
  • ತಾಲೂಕು ಮಟ್ಟದಲ್ಲಿ ಬೆಳಗ್ಗೆ 8 ರಿಂದ ರಾತ್ರಿ 8 ರ ವರೆಗೂ ಕಾರ್ಯ ನಿರ್ವಹಿಸುತ್ತಿರುವ ಗ್ರಂಥಾಲಯಗಳು.

ತಾಲೂಕು ಮಟ್ಟದಲ್ಲಿ ಅಲೆಮಾರಿ ಜನಾಂಗ, ಕೊಳಚೆ ಪ್ರದೇಶದಲ್ಲಿ ಗ್ರಂಥಾಲಯ ತೆರೆಯುವುದು ಸೇರಿದಂತೆ ಅನೇಕ ಕೆಲಸ ಮಾಡುತ್ತಿದ್ದರೂ ಕೂಡ ನಮ್ಮ ಮೇಲೆ ದೂಷಿಸುವಿಕೆ ಮಾತ್ರ ನಿಂತಿಲ್ಲ ಅಂತಾರೆ ಸಿಬ್ಬಂದಿ ವರ್ಗ.

ಒಟ್ಟಾರೆ, ನಾವು ಮಾಡುವ ಕೆಲಸ ದೋಷಮುಕ್ತವಾಗಿರಬೇಕು ಎಂದರೆ ನಮಗೆ ನೀಡಿದ ಕೆಲಸ ಸರಿಯಾಗಿರಬೇಕು. ಒಂದಕ್ಕಿಂತ ಹೆಚ್ಚಿನ ವ್ಯಕ್ತಿ ಕಾರ್ಯನಿರ್ವಹಿಸುವ ಜವಾಬ್ದಾರಿ ನಮ್ಮ ಹೆಗಲಿಗೆ ಬಂದರೆ, ಅದು ಬಹಳ ತೊಂದರೆ ಎನ್ನುವುದನ್ನು ಮರೆಯಬಾರದು.

ಈ ಮಧ್ಯೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಕೆಲಸ ನಿಜಕ್ಕೂ ಶ್ಲಾಘನೀಯವಾದುದು. ಜೊತೆಯಲ್ಲಿ ನೂತನ ಯೋಜನೆಗಳ ಅನುಷ್ಠಾನಕ್ಕೆ ಇವರಿಟ್ಟಿರುವ ದಿಟ್ಟತನದ ಹೆಜ್ಜೆ ಎಲ್ಲರಿಗೂ ಮಾದರಿಯೇ ಸರಿ.

~ ಸುರೇಶ್  ಎನ್.

Leave a Reply

comments

Related Articles

error: