ಮೈಸೂರು

ಯುವಕರ ಭವಿಷ್ಯ ಉಜ್ವಲಗೊಳಿಸಿದಾಗ ಮಾತ್ರ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ದೊರಕಲಿದೆ : ಮಹದೇವಪ್ಪ ಅಭಿಮತ

ದೇಶವನ್ನು ದೇಶಪ್ರೇಮದ ಮೂಲಕ ಕಟ್ಟುವ ಕೆಲಸವಾಗಬೇಕಿದೆ.  ಕೋಮಸೌಹಾರ್ದತೆ ಬೆಳೆಸಿ, ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ತಡೆದು ಸಮಾನತೆ ನೀಡುವ ಜೊತೆಗೆ ಯುವಕರ ಭವಿಷ್ಯವನ್ನು ಉಜ್ವಲಗೊಳಿಸಿದಾಗ ಮಾತ್ರ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ದೊರೆಯುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅಭಿಪ್ರಾಯಪಟ್ಟರು.

ಬುಧವಾರ ಮೈಸೂರಿನ ಸುಬ್ಬರಾಯನಕೆರೆಯಲ್ಲಿ ಆಯೋಜಿಸಿದ್ದ ಮೈಸೂರು ಚಲೋ ಚಳವಳಿ ದಿನಾಚರಣೆಯನ್ನು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ  ಡಾ.ಹೆಚ್.ಸಿ.ಮಹದೇವಪ್ಪ ಉದ್ಘಾಟಿಸಿದರು.  ಬಳಿಕ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಜನರು ತಮ್ಮ ಪ್ರಾಣವನ್ನೇ ತೆತ್ತಿದ್ದಾರೆ. ಪರಕೀಯರ ಆಡಳಿತದ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಮೈಸೂರಿನ ಅನೇಕರು ಮುಂಚೂಣಿಯಲ್ಲಿದ್ದು ಟಿಪ್ಪು ಸುಲ್ತಾನ್ ಕೂಡ ಪರಕೀಯರ ವಿರುದ್ಧ ಹೋರಾಡಿದ ಮಹಾನ್ ಹೋರಾಟಗಾರ ಎಂದರು. ದೇಶಭಕ್ತಿ, ರಾಷ್ಟ್ರಪ್ರೇಮ, ದೇಶಪ್ರೇಮವನ್ನು ಎಲ್ಲಾ ಜಾತಿ, ಮತ, ಪಂಥಗಳನ್ನು ಮೀರಿ ಬೆಳೆಸಬೇಕಿದ್ದು, ಎಲ್ಲರಲ್ಲೂ ಸಮಾನತೆಯ ಭಾವ ಮೂಡಿಸಬೇಕು. ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಅಸಮಾನತೆ, ಅಸ್ಪೃಶ್ಯತೆಯನ್ನು ನಿವಾರಿಸಿ ಸ್ವತಂತ್ರ ಭಾರತವನ್ನು ಪುನರ್ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಮಾತನಾಡಿ ಸ್ವಾತಂತ್ರ್ಯ ಬಂದು 70 ವರ್ಷಗಳೇ ಕಳೆದರೂ ಬಡವರಿಗೆ ಇನ್ನೂ ಸ್ವಾತಂತ್ರ್ಯ ಬಂದಿಲ್ಲ. ಬಡವರು ಬಡವರಾಗಿಯೇ ಉಳಿದಿದ್ದು  ಧನಿಕರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಬಡವರ ಏಳಿಗೆಗಾಗಿ ಸರ್ಕಾರಗಳು ಬಟ್ಟೆ, ಅನ್ನ, ಸೂರು, ಮನೆ ನೀಡುವ ಬದಲು ಜೀವನಕ್ಕೆ ಆಧಾರವಾದ ಭೂಮಿ ನೀಡಿದ್ದರೆ ಬಡತನ ನಿರ್ಮೂಲನೆಯಾಗುತ್ತಿತ್ತು. 65 ವರ್ಷಗಳಲ್ಲಿ 13 ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದರೂ ಬಡವರಿಗೆ ಯಾವ ಪ್ರಯೋಜನವೂ ಆಗಿಲ್ಲ ಎಂದರು.  ನಿಮಗೆ ಬೇಕಾದವರಿಗೆ ಬೇಕಾದಷ್ಟು ಭೂಮಿ ನೀಡುತ್ತೀರಿ, ನಿಮ್ಮ ಸಂಬಳವನ್ನು ವರ್ಷದಿಂದ ವರ್ಷಕ್ಕೆ ದುಪ್ಪಟ್ಟು ಮಾಡಿಕೊಳ್ಳುತ್ತೀರಿ ಆದರೆ, ಬಡವವರನ್ನು ಬಡವರನ್ನಾಗಿಯೇ ಇರಿಸಿದ್ದೀರಿ. ಇದು ಯಾವ ನ್ಯಾಯ. ಎಂದು ಪ್ರಶ್ನಿಸಿದರಲ್ಲದೇ  ಉಳುವವನಿಗೆ ಭೂಮಿ ನೀಡಿ ಉತ್ಪಾದನೆಯನ್ನು ಹೆಚ್ಚಿಸುವ ಕೆಲಸ ಮಾಡಿ ಎಂದರು. ಇಂದು ಉತ್ಪಾದನೆ ಕಡಿಮೆಯಾಗಿ ಜನಸಂಖ್ಯೆ ಅಧಿಕವಾಗುತ್ತಿದೆ. ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ತಿನ್ನುವ ಅನ್ನಕ್ಕೂ ಪರಿತಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಳಿಕ ಕಲಾತಂಡಗಳ ಮೆರವಣಿಗೆಗೆ ಮೇಯರ್ ಬಿ.ಎಲ್.ಭೈರಪ್ಪ ಚಾಲನೆ ನೀಡಿದರು. ಸುಬ್ಬರಾಯನಕರೆಯಿಂದ ಹೊರಟ ಮೆರವಣಿಗೆ ನೂರಡಿ ರಸ್ತೆಯಲ್ಲಿ ಬಲಕ್ಕೆ ತಿರುಗಿ, ರಾಮಸ್ವಾಮಿ ವೃತ್ತ ತಲುಪಿ, ರಾಮಸ್ವಾಮಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮತ್ತೆ ನೂರಡಿ ರಸ್ತೆ ಮಾರ್ಗವಾಗಿ ಪಾಠಶಾಲೆ, ಸಯ್ಯಾಜಿರಾವ್ ರಸ್ತೆ, ಕೆ.ಆರ್.ವೃತ್ತ, ಡಿ.ದೇವರಾಜ ಅರಸು ರಸ್ತೆಯಲ್ಲಿ ಎಡಕ್ಕೆ ತಿರುಗಿ ನಾರಾಯಣ ರಸ್ತೆ ಮೂಲಕ ಸುಬ್ಬರಾಯನಕೆರೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಭವನ ತಲುಪಿ ಮುಕ್ತಾಯಗೊಂಡಿತು.

ಕಾರ್ಯಕ್ರಮದಲ್ಲಿ ಶಾಸಕ ಎಂ.ಕೆ.ಸೋಮಶೇಖರ್, ಮೇಯರ್ ಬಿ.ಎಲ್.ಭೈರಪ್ಪ, ಉಪ ಮೇಯರ್ ವನಿತಾ ಪ್ರಸನ್ನ, ಜಿಲ್ಲಾಧಿಕಾರಿ ಡಿ.ರಂದೀಪ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯೀಮಾ ಸುಲ್ತಾನ, ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಎಂ.ಜಿ.ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ರೇವಣ್ಣ, ಹಾಸನ ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಶಿವಣ್ಣ, ಕಾಡಾ ಅಧ್ಯಕ್ಷ ಶಿವಲಿಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಚೆನ್ನಪ್ಪ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರು ಉಪಸ್ಥಿತರಿದ್ದರು.

 

Leave a Reply

comments

Related Articles

error: