ಮೈಸೂರು

ಬೀದಿ ಹಬ್ಬಕ್ಕೆ ಸಜ್ಜಾದ ಪ್ರವಾಸೋದ್ಯಮ ಇಲಾಖೆ : ಹೆಚ್.ಜನಾರ್ಧನ್

ಪ್ರವಾಸಿತಾಣಗಳ ಆಕರ್ಷಕ ಕ್ಯಾಲೆಂಡರ್ ಬಿಡುಗಡೆ

ಮೈಸೂರು, ಡಿ.22 : ಸಾಂಸ್ಕೃತಿಕ ನಗರಿ ಮೈಸೂರಿನ ಸುತ್ತಮುತ್ತಲಿನ ಆಕರ್ಷಕ ಪ್ರವಾಸಿತಾಣಗಳ ಪರಿಚಯಿಸುವ 2018ರ ವರ್ಣರಂಜಿತ ಕ್ಯಾಲೆಂಡರ್ ಅನ್ನು ಹೋಟೆಲ್ ಮಾಲೀಕರ ಸಂಘವು ಇಂದು ಪತ್ರಕರ್ತರ ಭವನದಲ್ಲಿ ಬಿಡುಗಡೆಗೊಳಿಸಿತು.

ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಹೆಚ್. ಜನಾರ್ಧನ್ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರವಾಸಿಗರ ಆಕರ್ಷಣೆ ಹಿನ್ನಲೆಯಲ್ಲಿ ಡಿ.23 ರಿಂದ ಜ.1ರವರೆಗೆ ಮಾಗಿ ಉತ್ಸವವನ್ನು ಆಯೋಜಿಸಿದ್ದು, ಉತ್ಸವದಲ್ಲಿ ಚಲನಚಿತ್ರೋತ್ಸವ, ಪರಂಪರಿಕಾ ಜಾಥಾ, ಫಲಪುಷ್ಪ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ವಿವರ ನೀಡಿದರು.

ಕಳೆದ ಬಾರಿ ನಾಡ ಹಬ್ಬ ದಸರಾ ಮಹೋತ್ಸವ ಸಂದರ್ಭದಲ್ಲಿ ಆಯೋಜಿಸಿದ್ದ ಓಪನ್ ಸ್ಟ್ರೀಟ್ ಫೆಸ್ಟಿವಲ್ ಗೆ ಅಭೂತ ಪೂರ್ವ ಜನಸ್ಪಂದನೆ ದೊರೆತಿದ್ದು, ಈ ನಿಟ್ಟಿನಲ್ಲಿ ಮತ್ತೊಮ್ಮೆ ಓಪನ್ ಸ್ಟ್ರೀಟ್ ಫೆಸ್ಟಿವಲ್ ಅನ್ನು ಡಿ.30ರಂದು ಬೆಳಗ್ಗೆ 7.30 ರಿಂದ 8.30ರವರೆಗೆ ಅರಸು ರಸ್ತೆಯಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಳೆದ ಬಾರಿ ಓಪನ್ ಸ್ಟ್ರೀಟ್ ಫೆಸ್ಟಿವಲ್ ನಲ್ಲಿ ನಡೆದ ಕೆಲವೊಂದು ಅಹಿತಕರ ಘಟನೆಗಳಿಂದ ಎಚ್ಚೆತ್ತಿದ್ದು, ಸಾರ್ವಜನಿಕರಿಗೆ ಕಿರಿಕಿರಿಯುಂಟು ಮಾಡಿದ್ದ ಪೀಪಿಯನ್ನು ಈ ಬಾರಿ ನಿಷೇಧಿಸಲಾಗಿದೆ ಹಾಗೂ ಸೂಕ್ತ ಭದ್ರತೆ ಒದಗಿಸಲಾಗುವುದು ಎಂದ ಅವರು, ಈ ಸಂದರ್ಭದಲ್ಲಿ 5 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ನಗರಕ್ಕೆ ಬೇಟಿ ನೀಡುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಕ್ಯಾಲೆಂಡರ್ ನಲ್ಲಿ ಮೈಸೂರು ನಗರದ ವಿಹಂಗಮ ನೋಟ, ಶ್ರವಣಬೆಳಗೊಳದ ವೈರಾಗ್ಯಮೂರ್ತಿ ಬಾಹುಬಲಿ ಮಹಮಸ್ತಾಕಾಭಿಷೇಕ, ನಂಜನಗೂಡಿನ ಮಹಾರಥೋತ್ಸವ ದೃಶ್ಯಗಳನ್ನೊಳಗೊಂಡ ಮೊದಲಾದ ಚಿತ್ರಗಳನ್ನು ಕ್ಯಾಲೆಂಡರ್ ಒಳಗೊಂಡಿದೆ,

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ, ಕಾರ್ಯದರ್ಶಿ ಎ.ಆರ್. ರವೀಂದ್ರ ಭಟ್, ಖಜಾಂಚಿ ಕೆ.ಭಾಸ್ಕರ್ ಶೆಟ್ಟಿ, ಧರ್ಮದತ್ತಿಯ ಉಪಾಧ್ಯಕ್ಷ ಉಗ್ರಯ್ಯ, ಸುಬ್ರಮಣ್ಯ ತಂತ್ರಿ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: