ಕರ್ನಾಟಕಪ್ರಮುಖ ಸುದ್ದಿ

ಬ್ರಾಂಡ್‍ ಬೆಂಗಳೂರಿಗಾಗಿ ಲಾಂಛನ – ದೇಶದಲ್ಲೇ ಮೊದಲ ನಗರ; ಪ್ರವಾಸಿಗರಿಗಾಗಿ ಅಪ್ಲಿಕೇಷನ್‍

ಬೆಂಗಳೂರು (ಡಿ.22): ಬ್ರಾಂಡ್‍ ಬೆಂಗಳೂರು ಮತ್ತು ನಗರದ ಇತಿಹಾಸ ಬಿಂಬಿಸುವ ಲಾಂಛನ ಪ್ರಕಟಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆ ಅಂತಿಮ ಹಂತದ ಸಿದ್ಧತೆ ನಡೆಸಿದೆ. ಈ ಮೂಲಕ ನಗರಕ್ಕಾಗಿ ಪ್ರತ್ಯೇಕ ಲಾಂಛನ ಹೊಂದುತ್ತಿರುವ ಭಾರತದ ಮೊದಲ ನಗರವಾಗಿ ಬೆಂಗಳೂರು ದಾಖಲಾಗಲಿದೆ.

ಇಷ್ಟೇ ಅಲ್ಲದೆ ಪ್ರವಾಸಿಗರಿಗೆ ಅನುಕೂಲಕ್ಕಾಗಿ ಬೆಂಗಳೂರಿನ ಸಮಗ್ರ ಮಾಹಿತಿ ನೀಡುವ ಸ್ಮಾರ್ಟ್‍ಫೋನ್ ಅಪ್ಲಿಕೇಷನ್ ಅನ್ನೂ ಸಹ ಇಲಾಖೆ ಬಿಡುಗಡೆ ಮಾಡಲಿದೆ.

ನ್ಯೂಯಾರ್ಕ್, ಪ್ಯಾರೀಸ್, ಆಮ್‍ಸ್ಟರ್‍ಡ್ಯಾಮ್ ಸೇರಿದಂತೆ ಕೆಲವೇ ಕೆಲವು ನಗರಗಳು ಇಂತಹ ಲಾಂಛನ ಹೊಂದಿದೆ. ಡಿ.24ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲಾಂಛನ ಲೋಕಾರ್ಪಣೆ ಮಾಡಲಿದ್ದಾರೆ. ನೂತನವಾಗಿ ವಿನ್ಯಾಸಗೊಳಿಸಿರುವ ಲಾಂಛನ ಹಾಗೂ ಬೆಂಗಳೂರಿನ ಪ್ರವಾಸ ಕೈಗೊಳ್ಳುವವರಿಗೆ ಮಾಹಿತಿ ಮತ್ತು ಸೇವೆ ಒದಗಿಸಲು ಭಾನುವಾರ ಡಿ.24ರಂದು ಅಪ್ಲಿಕೇಷನ್ ಬಿಡುಗಡೆ ಮಾಡಲಾಗುತ್ತಿದೆ.

ವಿಶ್ವಮಟ್ಟದಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಕೈಗಾರಿಕಾ ಇಲಾಖೆಗಳು ಕರ್ನಾಟಕವನ್ನು ಪ್ರತಿನಿಧಿಸುತ್ತವೆ. ಹಲವಾರು ಬಾರಿ ಬ್ರ್ಯಾಂಡ್ ಎನ್ನುತ್ತೇವಾದರೂ ನಿರ್ದಿಷ್ಟವಾಗಿ ವಿವರಿಸಲು ಸಾಧ್ಯವಾಗುತ್ತಿಲ್ಲ. ನ್ಯೂಯಾರ್ಕ್‍ಲ್ಲಿ ಈ ರೀತಿ ಲಾಂಛನ ರೂಪಿಸಿ ಅದಕ್ಕೆ ಪೂರಕ ಕಾರ್ಯಕ್ರಮ ರೂಪಿಸಿದ ನಂತರ ಉದ್ಯೋಗ ಅವಕಾಶಗಳು ಹೆಚ್ಚಾಗಿದೆ ಎಂದು ಪ್ರವಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರಿನ ಸ್ಥಳೀಯರಿಗೆ ಹಾಗೂ ಹೊರಗಿನಿಂದ ಬರುವವರಿಗೆ ಇಲ್ಲಿನ ಇತಿಹಾಸ ತಿಳಿಸುವುದರ ಜತೆಗೆ ಆಧುನಿಕ ಬೆಳವಣಿಗೆಗಳ ಪರಿಷಯವೂ ಆಗುವಂತೆ ಲಾಂಛನದಡಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.

ಬೆಂಗಳೂರು ಲಾಂಛನ ರಚನೆಯಲ್ಲಿ ಒಂದೇ ಸಂಸ್ಥೆಗೆ ಗುತ್ತಿಗೆ ನೀಡಲಾಗಿಲ್ಲ. ಅಂತರ್ಜಾಲದಲ್ಲಿ ಸಾರ್ವಜನಿಕರಿಂದ ಸ್ಪರ್ಧೆ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಒಟ್ಟು1,350ಲಾಂಛನಗಳು ಸಲ್ಲಿಕೆಯಾಗಿದ್ದವು. ರಾಷ್ಟ್ರೀಯ ಫ್ಯಾಷನ್ ಟೆಕ್ನಾಲಜಿ ಸಂಸ್ಥೆ, ಚಿತ್ರಕಲಾ ಪರಿಷತ್ ಸೇರಿ ಅನೇಕ ಸಂಸ್ಥೆಗಳ ಸಹಯೋಗದಲ್ಲಿ ಒಂದು ನವೋದಯ ಸಂಸ್ಥೆ ರೂಪಿಸಿದ ಲಾಂಛನವನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಬೆಂಗಳೂರು ಎಂದು ಬರೆಯುವ ಜತೆಗೆ ಘೋಷವಾಕ್ಯವಿರಲಿದೆ. ಸ್ಪರ್ಧೆಯಲ್ಲಿ ಗೆದ್ದ ಸಂಸ್ಥೆ 5 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ.

ಬೆಂಗಳೂರಿಗೆ ಆಗಮಿಸುತ್ತಿರುವ ಪ್ರವಾಸಿಗರಿಗೆ ಎಲ್ಲ ಮಾಹಿತಿ ನೀಡುವ ಮೊಬೈಲ್ ಆಪ್ ಸಿದ್ಧವಾಗಿದೆ. ಅಪ್ಲಿಕೇಷನ್ ನಲ್ಲಿ ಬೆಂಗಳೂರಿನ ಪ್ರವಾಸಿತಾಣಗಳ ಮಾಹಿತಿ ಇರಲಿದೆ. ಕಬ್ಬನ್ ಪಾರ್ಕ್ ಮಾರ್ಗ, ಲಾಲ್ ಬಾಗ್ ಪಥ, ದೇವಸ್ಥಾನ ಪಥ, ಬಬ್ ಪಥ ಹೀಗೆ ಪ್ರವಾಸಿಗರಿಗೆ ಆಸಕ್ತಿ ಇರುವ ವಿಷಯದಲ್ಲಿ ಸಂಚರಿಸಲು ಮಾಹಿತಿ ನೀಡಲಾಗುತ್ತದೆ.

ಅವಶ್ಯಕತೆಯಿದ್ದವರು ಅಪ್ಲಿಕೇನ್ ಮೂಲಕವೇ ಕ್ಯಾಬ್, ಬಸ್ ಬುಕ್ ಮಾಡಿ ಸುತ್ತಾಡಬಹುದು. ಆಸ್ಪತ್ರೆಗಳು, ಮೆಟ್ರೋ ನಿಲ್ದಾಣಗಳು, ಬಿಎಂಟಿಸಿ ಬಸ್ ಸಮಯ ಬೆಂಗಳೂರಿನಲ್ಲಿ ದಿನಪೂರ್ತಿ ನಡೆಯಲಿರುವ ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಬಹುದು.

(ಎನ್‍ಬಿ)

Leave a Reply

comments

Related Articles

error: