ಕರ್ನಾಟಕಪ್ರಮುಖ ಸುದ್ದಿಮೈಸೂರು

ಕಪ್ಪು ಹಣ ಕೇವಲ ನೋಟಿನಲ್ಲಿ ಇಲ್ಲ – ಕಠಿಣ ಕಾನೂನು ರೂಪಿಸಿ : ಮಾಜಿ ಸಂಸದ ಹೆಚ್.ವಿಶ್ವನಾಥ ಆಗ್ರಹ

ಪ್ರಧಾನಿ ಮೋದಿ ಜೀಯವರ ಕಪ್ಪು ಹಣದ ಚಲಾವಣೆ ಹಾಗೂ ಕಾಳಧನಿಕರ ಆರ್ಭಟ ನಿಯಂತ್ರಣಕ್ಕಾಗಿ ನೋಟುಗಳನ್ನು ಅಮಾನ್ಯಗೊಳಿಸಿದ್ದನ್ನು ವೈಯುಕ್ತಿಕವಾಗಿ ಸ್ವಾಗತಿಸುತ್ತೇನೆ. ಆದರೆ, ಅವರು ಏಕಾಏಕಿಯಾಗಿ ಕೈಗೊಂಡ ಕ್ರಮದಿಂದ ಸಾಮಾನ್ಯ ಜನರು ಎದುರಿಸುತ್ತಿರುವ  ಬವಣೆಗೆ ಮರುಕ ವ್ಯಕ್ತಪಡಿಸುತ್ತೇನೆ ಎಂದು ಮಾಜಿ ಸಂಸದ ಹೆಚ್.ವಿಶ್ವನಾಥ್ ಹೇಳಿದರು.

ಅವರು ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿ ನಡೆಸಿ, 1978ರಲ್ಲಿಯೇ ಗುಜರಾತಿನವರೇ ಆದ ಮೊರಾರ್ಜಿ ದೇಸಾಯಿಯರವರು 10 ಸಾವಿರ, 5 ಸಾವಿರ ಹಾಗೂ ಸಾವಿರ ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸಿದ್ದರು. ಮೋದಿಯವರ ಕ್ರಮ ಕ್ರಾಂತಿಕಾರಿಯೇನಲ್ಲ. ಕೊಂಡಾಡುವುದು ನಿಲ್ಲಲಿ, ಚುನಾವಣೆಯಲ್ಲಿ ಘೋಷಿಸಿದಂತೆ ವಿದೇಶದಲ್ಲಿರುವ ಕಪ್ಪು ಹಣ ತರುವ ಬದಲು ದೇಶದಲ್ಲಿ ಕಾಗದ ಹುಲಿಯ ಮೂಲಕ ಜನತೆಯಲ್ಲಿ ಭ್ರಮೆ ಹುಟ್ಟಿಸಿದ್ದಾರೆ. ಪೇಪರ್ ಬದಲಾಗಬಹುದು ಎಲ್ಲವೂ ಬದಲಾಗುವುದಿಲ್ಲ. ಕಪ್ಪು ಹಣ ಬಿಳುಪಾಗುವ ಮುನ್ನ ದೇಶದ ಕಾನೂನಿನ ಮೂಲಕ ಕಾಳಧನಿಕರ ಹೆಡೆಮುರಿ ಕಟ್ಟಿ ಎಂದು ಆಗ್ರಹಿಸಿದರು.

ಕಪ್ಪು ಹಣದಿಂದಲೇ ಗದ್ದುಗೆ : ಮೋದಿಯವರು ಲೋಕಸಭಾ ಚುನಾವಣೆಯನ್ನು ಎದುರಿಸಿ ಗದ್ದುಗೆಗೇರಿದ್ದು ಇದೇ ಕಪ್ಪು ಹಣದಿಂದಲೇ. ಮೇರೆ ಪ್ಯಾರೇ ದೇಶ್ ವಾಸಿಯೋ.. ನನಗೆ 50 ದಿನಗಳ ಸಹಕಾರ ನೀಡಿ ದೇಶವನ್ನು ಬದಲಿಸುವೆ ಎಂದಿದ್ದಾರೆ.  ಯಾವ ರೀತಿಯ ಸಹಕಾರ ಬೇಕು? ಈಗಾಗಲೇ ಜನಸಾಮಾನ್ಯರು ದೈನಂದಿನ ಪೂರೈಕೆಗಾಗಿ ನಲುಗುತ್ತಿದ್ದಾರೆ. ಜನರನ್ನು ನಂಬಿಸುವುದು ಮೋದಿಯವರಿಗೆ ಕರಗತವಾಗಿದೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಪ್ಪು ಹಣದ ರೂಪವೇ ಬೇರೆ: ಕಪ್ಪು ಹಣವೂ  ಭೂಮಿ, ಚಿನ್ನ-ಬೆಳ್ಳಿ, ವಿದೇಶಿ ಕರೆನ್ಸಿ ಹಾಗೂ ಮೀಟರ್ ಬಡ್ಡಿ ರೂಪದಲ್ಲಿದೆ. ಮೀಟರ್ ಬಡ್ಡಿ ಕಾಟ ತಾಳದೇ ಎಷ್ಟೋ ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಮಯದ ದುರುಪಯೋಗಪಡಿಯುತ್ತಿರುವ ಅವರು ಭೂಮಿ, ಮನೆ ಹಾಗೂ ವಾಹನಗಳನ್ನು ಬಲವಂತವಾಗಿ ಅಕ್ರಮಿಸುತ್ತಿದ್ದಾರೆ. ಈ ಬಗ್ಗೆ ರಾಜ್ಯ ಗೃಹ ಸಚಿವರು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಮೀಟರ್ ಬಡ್ಡಿ ದಂಧೆಕೋರರನ್ನು ನಿಯಂತ್ರಿಸಬೇಕು ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ಬಾಡಿಗೆ ಚಿಂತನೆ : ಕಳೆದ 70 ವರ್ಷಗಳಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್ ಸರ್ಕಾರವೂ ಶ್ರಮಿಕರಿಗೆ, ಬಡವರಿಗೆ ಹಾಗೂ ಅಬಲರಿಗಾಗಿ ಬಲಿಷ್ಠ ಕಾನೂನುಗಳನ್ನು ರೂಪಿಸಿ ಅವರ ಏಳ್ಗೆಗೆ ನೆರವಾಗಿದೆ. ಅಮೇರಿಕಾವನ್ನು ಹಿಂಬಾಲಿಸುತ್ತಿರುವ ನಿಮ್ಮದು ಬಾಡಿಗೆ ಚಿಂತನೆ ದೇಶದ ರಕ್ಷಣೆ, ಅರಣ್ಯ, ನೀರಾವರಿ ಯಾವುದೂ ಅಭಿವೃದ್ಧಿ ಹೊಂದಿಲ್ಲ. ಶಿಕ್ಷಣದ ಅನುದಾನವನ್ನು ಕಡಿತಗೊಳಿಸಿದ್ದಾರೆ.

ನಲವತ್ತು ಸಾವಿರ ಐಎಎಸ್, ಐಪಿಎಸ್ ಹಾಗೂ ಐಎಫ್‍ಎಸ್ ಅಧಿಕಾರಿಗಳಲ್ಲಿ ಶೇ.30ರಷ್ಟು ಮಂದಿ ಬಳಿ 25 ರಿಂದ 30 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಇಂತಹ ಅಧಿಕಾರಿಗಳಿಂದ ಸ್ವಚ್ಛತೆ ಸಾಧ್ಯವೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಅದ್ದೂರಿ ಮದುವೆ ಕ್ರಮವೇಕಿಲ್ಲ ? : ಕಪ್ಪುಹಣ ಹಾಗೂ ಕಾಳಧನದಿಂದಲೇ 600 ಕೋಟಿ ರೂಪಾಯಿ ವೆಚ್ಚದಲ್ಲಿ ಅದ್ಧೂರಿಯಾಗಿ ಮಗಳ ಮದುವೆ ನಡೆಸುತ್ತಿರುವ ಮಾಜಿ ಸಚಿವ ನಿಮ್ಮದೇ ಪಕ್ಷದ ಮುಖಂಡ  ಜನಾರ್ದನ ರೆಡ್ಡಿ ವಿರುದ್ಧ ಯಾಕೆ ಕ್ರಮ ಜರುಗಿಸಿಲ್ಲ?  ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇನು ಕಣ್ಮುಚ್ಚಿ ಕುಳಿತಿದ್ದಾರೆಯೇ? ಕೇವಲ ಪಾನ್ ಬೀಡಾಕ್ಕಾಗಿಯೇ ಇಪ್ಪತ್ತು ಲಕ್ಷ ವೆಚ್ಚಗೊಳಿಸಿದ್ದು ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲವೇ? ಕಾಳಹಣ ತಡೆಯುವರು ಮೊದಲು ಇಂತಹವರನ್ನು ಮಟ್ಟಹಾಕಬೇಕು ಎಂದು ಆಕ್ರೋಶಭರಿತ ವ್ಯಂಗ್ಯವಾಡಿದರು.

ಜಯಂತಿಗಳು ರದ್ದಾಗಲಿ : ಈ ಕೂಡಲೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಎಲ್ಲಾ ಜಯಂತಿಗಳನ್ನು ಹಿಂಪಡೆಯಲಿ. ಜಯಂತಿಗಳಿಂದ ಸಮಾಜದ ಸ್ವಾಸ್ಥ್ಯ ಹದಗೆಟ್ಟು ಜಾತಿ ಜಾತಿ ಮಧ್ಯೆ ವೈಷಮ್ಯ ಬೆಳೆಯುತ್ತಿದೆ. ಸರ್ಕಾರದ ಮಟ್ಟದಲ್ಲಿ ಆಚರಿಸುತ್ತಿರುವ ಬಸವ, ಕನಕ, ವಾಲ್ಮೀಕಿ ಹಾಗೂ ಇತರೆ  ಜಯಂತಿಗಳಿಗೆ ಅನಗತ್ಯ ಸರ್ಕಾರದ ಹಣ ಬಳಕೆಯಾಗುತ್ತಿದ್ದು, ಅಧಿಕಾರಿಗಳು ಜಯಂತಿಗಳ ಪೂರ್ವಭಾವಿ ಸಭೆ ಹಾಗೂ ಸಮಾರಂಭಗಳಲ್ಲಿಯೇ ಕಾಲ ಕಳೆಯುವಂತಾಗಿದ್ದು ಅಭಿವೃದ್ಧಿಯೂ ಕುಂಠಿತವಾಗುತ್ತಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಟಿ.ಎಸ್.ರವಿಶಂಕರ್, ಗ್ರಾಮಾಂತರ ಅಧ್ಯಕ್ಷ ಡಾ.ವಿಜಯಕುಮಾರ್, ನಗರ ಪ್ರಧಾನ ಕಾರ್ಯದರ್ಶಿ ಶೌಕತ್ ಅಲಿಖಾನ್ ಹಾಗೂ ಹಿಂದುಳಿದ ವರ್ಗದ ವೇದಿಕೆ ಅಧ್ಯಕ್ಷ ಶಿವಕುಮಾರ್ ಉಪಸ್ಥಿತರಿದ್ದರು.

Leave a Reply

comments

Related Articles

error: