ಕರ್ನಾಟಕಪ್ರಮುಖ ಸುದ್ದಿ

ಕಳಸಾ ಬಂಡೂರಿ ನಾಲಾ ಯೋಜನೆ ವಿರೋಧ ವ್ಯಕ್ತಪಡಿಸಿಯೇ ಇಲ್ಲ : ಹೆಚ್.ಡಿ ಕುಮಾರಸ್ವಾಮಿ

ರಾಜ್ಯ(ಬೆಂಗಳೂರು) ಡಿ. 22:- ಉತ್ತರ ಕರ್ನಾಟಕದ ಭಾಗಕ್ಕೆ ನೀರು ಹರಿಸಲು ಕಳಸಾ ಬಂಡೂರಿ ನಾಲಾ ಯೋಜನೆ ವಿರೋಧ ವ್ಯಕ್ತಪಡಿಸಿಯೇ ಇಲ್ಲ. ನಾನು ಈ ಯೋಜನೆಗೆ ವಿರೋಧವಾಗಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಹೇಳಿಕೆ ನೀಡುವ ಮೂಲಕ ಡಬಲ್ ಗೇಮ್ ಆಟ ಆಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳಸಾ ಬಂಡೂರಿ ನಾಲಾ ಯೋಜನೆಗೆ ಅನುಮತಿ ನೀಡಿದ್ದೇ ನಾನು. ಒಂದು ವೇಳೆ ವಿರೋಧ ವ್ಯಕ್ತಪಡಿಸಿದ್ದೇ ಆಗಿದ್ದಲ್ಲಿ ಸಚಿವ ಸಂಪುಟ ಸಭೆಗೆ ಈ ಪ್ರಸ್ತಾವವನ್ನು ಮಂಡಿಸಲು ಅವಕಾಶವನ್ನೇ ನೀಡುತ್ತಿರಲಿಲ್ಲ. ಇದು ಬಿ.ಎಸ್ ಯಡಿಯೂರಪ್ಪ ಅವರಿಗೂ ಗೊತ್ತು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನೆಲ-ಜಲದ ವಿಷಯದಲ್ಲಿ ಎಂದಿಗೂ ನಾಟಕ ಮಾತುಗಳನ್ನಾಡಿಲ್ಲ. ಕಾವೇರಿ ಜಲ ವಿವಾದದ ಹಿನ್ನೆಲೆಯಲ್ಲಿ ಮತ್ತೊಂದು ವಿವಾದ ಸೃಷ್ಟಿಯಾಗಬಾರದು ಎಂಬ ಕಾರಣಕ್ಕಾಗಿ ಈ ಯೋಜನೆಯನ್ನು ಆತುರಾತುರವಾಗಿ ತರುವ ಬದಲು ಹಣಕಾಸು, ಅರಣ್ಯ, ಪರಿಸರದ ಅನುಮತಿಗಳ ಬಗ್ಗೆ ಚರ್ಚೆ ನಡೆಸಿದ್ದೆ. ಯಾವುದೇ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ಸ್ಪಷ್ಟತೆ ಇರಬೇಕು ಎಂದು ಪ್ರತಿಪಾದಿಸಿದ್ದೆ ಎಂದು ಹೇಳಿದರು. ಅಂದಿನ ಸಚಿವ ಸಂಪುಟ ಸಭೆಯಲ್ಲಿ ಬಿ.ಎಸ್ ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಇದ್ದರು. ನಾನು ಈ ಯೋಜನೆಗೆ ವಿರೋಧ ಮಾಡಿಲ್ಲ. ಇದು ಯಡಿಯೂರಪ್ಪರವರು ಆ ಭಾಗದ ಜನತೆಯನ್ನು ವಂಚಿಸಲು ಆಡಿರುವ ಮಾತು ಎಂದು ಗುಡುಗಿದರು. ಉತ್ತರ ಕರ್ನಾಟಕದ ಜನತೆ ಇಂತಹ ನಾಯಕರ ಬಗ್ಗೆ ಎಚ್ಚರದಿಂದಿರಬೇಕು. ರಾಜ್ಯವನ್ನು, ಜನತೆಯನ್ನು ಲಘುವಾಗಿ ಪರಿಗಣಿಸುತ್ತಿರುವ ಬಿಜೆಪಿ ನಾಯಕರು ದ್ರೋಹ ಬಗೆಯಲಿದ್ದಾರೆ ಎಂದು ಎಚ್ಚರಿಸಿದರು. ಮಹದಾಯಿ ನೀರು ಹಂಚಿಕೆ ವಿವಾದವನ್ನು ಪ್ರಸ್ತಾಪಿಸಿದ ಹೆಚ್.ಡಿ ಕುಮಾರಸ್ವಾಮಿ, ಈ ವಿಷಯದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಅಧಿಕೃತರೇ ಎಂದು ವ್ಯಂಗ್ಯವಾಡಿದರು. ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್‌ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ನಂಬಿಕೆ ಇಲ್ಲವಂತೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಗೋವಾದ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಇದನ್ನು ಗಮನಿಸಿದರೆ ಗೋವಾ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕರ ನಿಜವಾದ ರಾಜಕಾರಣ ಬಯಲಾಗಿದೆ ಎಂದು ಆರೋಪಿಸಿದರು. ಪ್ರಸ್ತುತ ಮಹದಾಯಿ ನದಿ ನೀರಿನ ಹಂಚಿಕೆ ಸುಪ್ರೀಂಕೋರ್ಟಿನ ಮುಂದೆ ಇದೆ. ಎರಡೂ ರಾಜ್ಯಗಳು ಅರ್ಜಿ ಸಲ್ಲಿಸಬೇಕು. ಆದರೆ, ಇದರ ನಡುವೆ ಚುನಾವಣೆಗಳಲ್ಲಿ ಮತ ಪಡೆಯುವ ಸಲುವಾಗಿಯೇ ಉತ್ತರ ಕರ್ನಾಟಕದ ಜನತೆಯ ಮುಂದೆ ಬಿಜೆಪಿ ನಾಯಕರು, ನಾಟಕವಾಡುತ್ತಿದ್ದಾರೆ. ನೀರಿಗಾಗಿ ಹೋರಾಟ ನಡೆಸಿದ ಜನರು, ಇವತ್ತಿಗೂ ಜೈಲಿನಲ್ಲಿದ್ದಾರೆ. ನ್ಯಾಯಾಲಯಗಳಿಗೆ ಅಲೆದಾಡುತ್ತಿದ್ದಾರೆ. ಇಂತಹ ನಾಯಕರ ಬಗ್ಗೆ ಆ ಭಾಗದ ಜನರು ಎಚ್ಚರದಿಂದಿರಬೇಕು ಎಂದು ಹೇಳಿದರು. ರಾಜ್ಯಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಗೋವಾ ಮುಖ್ಯಮಂತ್ರಿ ಬರೆದ ಪತ್ರವನ್ನೇ ಹಿಡಿದುಕೊಂಡು ಯಡಿಯೂರಪ್ಪ ಅವರು ಬೀಗುತ್ತಿದ್ದಾರೆ. ನೀರಿನ ಹಂಚಿಕೆ ವಿಷಯದಲ್ಲಿ ಈ ಪತ್ರದಿಂದೇನು ಲಾಭ ಎಂದು ಪ್ರಶ್ನಿಸಿದರು.

ಅಧಿಕಾರದ ಸ್ವಾರ್ಥಕ್ಕೆ ಜನತೆಯನ್ನು ಬಲಿಕೊಡುವುದು ಸರಿಯಲ್ಲ. ಬಹಳಷ್ಟು ದಿನ ಇಂತಹ ರಾಜಕಾರಣ ನಡೆಯುವುದಿಲ್ಲ. ದೆಹಲಿ ನಾಯಕರೂ ಕೂಡ ಈ ವಿಚಾರದಲ್ಲಿ ಕೀಳುಮಟ್ಟದ ರಾಜಕಾರಣ ನಡೆಸುತ್ತಿದ್ದಾರೆ ಎಂದು ಆಪಾದಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: