ಕರ್ನಾಟಕ

ಅರಕಲಗೂಡು ರಾಜ್ಯಮಟ್ಟದ ಪಶುಮೇಳ ಇತಿಹಾಸದಲ್ಲೇ ಮೊದಲು: ಸಚಿವ ಎ.ಮಂಜು

ಬೆಂಗಳೂರು (ಡಿ.22): ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಜನವರಿ 4 ರಿಂದ 6 ರವರೆಗೆ ರಾಜ್ಯ ಮಟ್ಟದ ಪಶು ಮೇಳವನ್ನು ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಹಮ್ಮಿಕೊಂಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಳವನ್ನು ಉದ್ಫಾಟಿಸಲಿದ್ದಾರೆ ಎಂದು ಪಶುಸಂಗೋಪನೆ ಮತ್ತು ಹಾಸನ ಜಿಲ್ಲೆಯ ಉಸ್ತುವಾರಿ ಸಚಿವ ಎ. ಮಂಜು ಅವರು ತಿಳಿಸಿದರು.

ಅವರು ಇಂದು ವಿಧಾನ ಸೌಧದ ತಮ್ಮ ಕಛೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ರಾಜ್ಯದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಪಶುಸಂಗೋಪನಾ ಇಲಾಖೆ ವತಿಯಿಂದ ಈ ಮೇಳವನ್ನು ಆಯೋಜಿಸಲಾಗಿದೆ. ರಾಜ್ಯದ ಮತ್ತು ಹೊರರಾಜ್ಯದ ವಿವಿಧ ಜಾನುವಾರು ತಳಿಗಳು, ಕೋಳಿ ತಳಿಗಳು ಹಾಗೂ ರೇಷ್ಮೆ ಸಾಕಾಣಿಕೆ ಬಗ್ಗೆ ಪ್ರದರ್ಶನ ಮತ್ತು ಮಾಹಿತಿ ನೀಡಲಾಗುವುದು.

ಪಶುಸಂಗೋಪನೆಯಲ್ಲಿ ವಿವಿಧ ನೂತನ, ಸಂಶೋಧನೆ ಅವಿಷ್ಕಾರಗಳನ್ನು ರೈತರಿಗೆ ಪರಿಚಯ ಮಾಡಲಾಗುವುದು. ದೇಶೀಯ ಜಾನುವಾರುಗಳಲ್ಲಿ 9 ತಳಿಗಳು 2 ವಿದೇಶಿ ಜಾನುವಾರು ತಳಿಗಳು, 9 ಕುರಿ ತಳಿಗಳು, 5 ಮೇಕೆ ತಳಿಗಳು, 4 ಎಮ್ಮೆ ತಳಿಗಳು, 4 ಹಂದಿ ತಳಿಗಳು, 5 ದೇಶಿ ಕೋಳಿ/ಬಾತುಕೋಳಿಯ ತಳಿಗಳು ಮತ್ತು 4 ಮೊಲ ತಳಿಗಳನ್ನು ಪ್ರದರ್ಶಿಸಲಾಗುವುದು.

ಪಶುಮೇಳದ ವಿಶೇಷ ಆಕರ್ಷಣೆಯಾಗಿ ಕಂಬಳ ಕೋಣಗಳ ಪ್ರದರ್ಶನ ಏರ್ಪಡಿಸಲಾಗಿದೆ. ಪಶುಮೇಳದಲ್ಲಿ ಕರುಗಳ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ದೇಶಿ, ವಿದೇಶಿ ಹಸುಗಳ ಹಾಗೂ ಎಮ್ಮೆಗಳ ಹಾಲು ಕರೆಯುವ ಸ್ಪರ್ಧೆ ಏರ್ಪಡಿಸಲಾಗಿದೆ.

ಹಾಲು ಕರೆಯುವ ಸ್ಪರ್ಧೆಯಲ್ಲಿ ವಿಜೇತ ಸರ್ವೋತ್ತಮ ಚಾಂಪಿಯನ್ ಹಸುವಿಗೆ ರೂ. 1.00 ಲಕ್ಷ ಬಹುಮಾನ ಹಾಗೂ ತಳಿವಾರು ಪ್ರಥಮ, ದ್ವಿತೀಯ ತೃತೀಯ ವಿಜೇತ ರಾಸುಗಳಿಗೆ ಕ್ರಮವಾಗಿ ರೂ 50,000 ರೂ. 30,000 ರೂ. 20,000 ಗಳ ಬಹುಮಾನ ನೀಡಲಾಗುವುದು.

ಪ್ರದರ್ಶನದಲ್ಲಿ ಭಾಗವಹಿಸುವ ಪ್ರತಿಯೊಂದು ಜಾನುವಾರುಗಳಿಗೆ ಕರ್ನಾಟಕ ಹಾಲು ಮಹಾ ಮಂಡಳಿಯಿಂದ 10 ಕೆ.ಜಿ. ಉಚಿತ ಪಶು ಆಹಾರ ನೀಡಲಾಗುವುದು.

ಪ್ರದರ್ಶನಕ್ಕೆ ಭೇಟಿ ನೀಡುವ ಸಾರ್ವಜನಿಕರಿಗೆ ಎನ್.ಇ.ಸಿ.ಸಿ. ವತಿಯಿಂದ ಉಚಿತವಾಗಿ ಬೇಯಿಸಿದ ಮೊಟ್ಟೆ ಮತ್ತು ಕರ್ನಾಟಕ ಹಾಲು ಮಹಾ ಮಂಡಳಿಯಿಂದ ಮಜ್ಜಿಗೆ, ಹಾಲು ನೀಡಲಾಗುವುದು.

ಪ್ರಗತಿ ಪರ ರೈತರು ಮತ್ತು ವಿಶ್ವವಿದ್ಯಾಲಯಗಳ ತಜ್ಞರೊಂದಿಗೆ ಹೊಸ ಹೊಸ ಅವಿಷ್ಕಾರಗಳ ಹಾಗೂ ಅನುಭವನಗಳ ಹಂಚಿಕೆ ಮತ್ತು ಸಮಸ್ಯೆಗಳ ಬಗ್ಗೆ ವೈಜ್ಞಾನಿಕ ಸಂವಾದ ಏರ್ಪಡಿಸಲಾಗಿದೆ.

20 ಕ್ಕೂ ಹೆಚ್ಚು ಶ್ವಾನಗಳ ತಳಿ ಪ್ರದರ್ಶನ ಮತ್ತು ಸ್ಫರ್ಧೆ. ಪಶು ಮೇಳದಲ್ಲಿ ವಿವಿಧ ಅಭಿವೃದ್ಧಿ ಇಲಾಖೆಗಳಿಗೆ ಮತ್ತು ಖಾಸಗಿ ಕಂಪನಿಗಳಿಗಾಗಿ 200 ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗುವುದು.

ಜಾನುವಾರುಗಳಿಗಾಗಿ 200 ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗುವುದು. ಪ್ರದರ್ಶನದಲ್ಲಿ ಭಾಗವಹಿಸುವ ಜಾನುವಾರುಗಳಿಗೆ ಉಚಿತ ಮೇವು, ನೀರು ಮತ್ತು ನೆರಳಿನ ವ್ಯವಸ್ಥ ಕಲ್ಪಿಸಲಾಗಿದೆ.

ಪ್ರದರ್ಶನದಲ್ಲಿ ಭಾಗವಹಿಸುವ ರೈತರಿಗಾಗಿ ಉಚಿತ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಪಶು ಮೇಳದಲ್ಲಿ ಕುಸ್ತಿ ಸ್ಪರ್ಧೆ ಏರ್ಪಡಿಸಲಾಗಿದೆ. ರೈತರಿಗಾಗಿ ಸಾಯಂಕಾಲ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಚಿವರು ಮಾಧ್ಯಮದವರಿಗೆ ವಿವರಿಸಿದರು.

(ಎನ್‍ಬಿಎನ್‍)

Leave a Reply

comments

Related Articles

error: