
ಮೈಸೂರು
ಕಾನೂನು ಇರುವುದು ಸುರಕ್ಷತೆಗೆ ಎಂದು ಭಾವಿಸದಿರುವುದು ದುರಂತ : ರುದ್ರಮುನಿ ಬೇಸರ
ಯುವ ಜನಾಂಗ ಕಾನೂನು ಇರುವುದು ಅವರ ಸುರಕ್ಷತೆಗೆ ಎಂದು ಭಾವಿಸದಿರುವುದು ದುರಂತ ಎಂದು ಪೊಲೀಸ್ ಉಪ ಆಯುಕ್ತ ರುದ್ರಮುನಿ ಬೇಸರ ವ್ಯಕ್ತಪಡಿಸಿದರು.
ಮೈಕ್ಯಾಬ್, ಜೆಎಸ್ಎಸ್ ಕಾನೂನು ಕಾಲೇಜು, ಬೆಂಗಳೂರಿನ ಕನ್ಸ್ಯೂಮರ್ ರೈಟ್ಸ್ ಎಜುಕೇಷನ್ ಆ್ಯಕ್ಷನ್ ಗ್ರೂಪ್ ವತಿಯಿಂದ ಬುಧವಾರ ಕಾಲೇಜಿನ ಬೆಳ್ಳಿ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತೆ ಕುರಿತು ದುಂಡು ಮೇಜಿನ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪೊಲೀಸ್ ಉಪ ಆಯುಕ್ತ ರುದ್ರಮುನಿ ಮಾತನಾಡಿದರು.
ಇಂದಿನ ಯುವಪೀಳಿಗೆ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಹಾಗೂ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಆದರೆ ಇಂದಿನ ಯುವಪೀಳಿಗೆ ರಸ್ತೆ ಸಂಚಾರಿ ನಿಯಮ ಮತ್ತು ಸುರಕ್ಷತೆಗಳನ್ನು ಪಾಲಿಸುತ್ತಿಲ್ಲ. ಸಂಚಾರಿ ನಿಯಮ ಜೀವನದ ಅವಿಭಾಜ್ಯ ಅಂಗವಾಗಿದ್ದು ಅದನ್ನು ಕಡೆಗಣಿಸಬೇಡಿ ಎಂದು ಸಲಹೆ ನೀಡಿದರು.
ಯುವಕರೇ ಇಂದು ಹೆಚ್ಚಿನ ಪ್ರಮಾಣದಲ್ಲಿ ಅಪಘಾತಕ್ಕೆಕ್ಕಿಡಾಗುತ್ತಿದ್ದಾರೆ. ಪೋಷಕರು ಮಕ್ಕಳ ಒತ್ತಡಕ್ಕೆ ಮಣಿದು ಬೈಕನ್ನು ತೆಗೆಸಿಕೊಡುತ್ತಾರೆ. ಯುವಪೀಳಿಗೆಗೆ ಬೈಕನ್ನು ಓಡಿಸುವುದು ಒಂದು ರೀತಿಯ ಥ್ರಿಲ್ ಆಗಿಬಿಟ್ಟಿದ್ದು, ಈ ಥ್ರಿಲ್ ನಿಂದಲೇ ಎಷ್ಟೋ ಜೀವಗಳು ಬಲಿಯಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಹೆಲ್ಮೆಟ್ ಕಡ್ಡಾಯವಾಗಿ ಜಾರಿಗೊಳಿಸಿರುವುದು ನಿಮ್ಮ ಒಳ್ಳೆಯದಕ್ಕೆ. ಬೇಜವಾಬ್ದಾರಿತನ ತೋರದೆ ಕಡ್ಡಾಯವಾಗಿ ಪಾಲಿಸಿ. ವಾಹನ ಚಾಲನೆ ಮಾಡುವಾಗ ವಾಹನ ಚಾಲನೆ ಪರವಾನಗಿ ಪತ್ರವನ್ನು ನಿಮ್ಮ ಜೊತೆ ಇರಿಸಿಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಿಆರ್ಇಎಟಿ ನ ವೈ.ಜಿ.ಮುರಳೀಧರನ್, ಆರ್ಟಿಓ ಅಶ್ಫಕ್ ಅಹಮದ್, ಕಾಲೇಜಿನ ಪ್ರಾಂಶುಪಾಲ ಕೆ.ಎಸ್.ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.