
ಪ್ರಮುಖ ಸುದ್ದಿಮೈಸೂರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ವೈದ್ಯರ ಮೌನ ಪ್ರತಿಭಟನೆ
ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಸೂದೆಯನ್ನು ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆಯ ವೈದ್ಯರು ಬುಧವಾರ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಜೆ.ಕೆ. ಮೈದಾನದಲ್ಲಿ ಜಮಾವಣೆಗೊಂಡ ಕೆ.ಆರ್. ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳ ನೂರಾರು ಮಂದಿ ಪ್ರತಿಭಟನಾಕಾರರು ಜೆ.ಕೆ. ಮೈದಾನದಿಂದ ಹೊರಟು ನಾರಾಯಣ ಶಾಸ್ತ್ರಿ ರಸ್ತೆ, ದೇವರಾಜ ಅರಸು ರಸ್ತೆ ಮಾರ್ಗವಾಗಿ ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಪ್ರತಿಭಟನೆ ನಡೆಸಿದರು.
ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ತುರ್ತು ಚಿಕಿತ್ಸೆಗಳನ್ನು ಹೊರತುಪಡಿಸಿ ಉಳಿದೆಲ್ಲ ಕಾರ್ಯಗಳನ್ನು ಸ್ಥಗಿತಗೊಳಿಸಿ ಪ್ರತಿಭಟಿಸಿದರು. ವೈದ್ಯರಿಗೆ ಶಿಕ್ಷಿಸುವುದು ಮತ್ತು ವೈದ್ಯರ ಮೇಲಾಗುತ್ತಿರುವ ಹಲ್ಲೆಗಳನ್ನು ತೀವ್ರವಾಗಿ ಖಂಡಿಸಿದರು. ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಸೂದೆಯನ್ನು ನಿಲ್ಲಿಸಬೇಕು. ಈಗಾಗಲೇ ಚಾಲ್ತಿಯಲ್ಲಿರುವ ಭಾರತೀಯ ವೈದ್ಯಕೀಯ ಪರಿಷತ್ ಸಕಾಯಿದೆಯಲ್ಲಿ ಸೂಕ್ತ ಬದಲಾವಣೆಗಳ ಅಗತ್ಯವಿದ್ದಲ್ಲಿ ಕಾಯಿದೆಯನ್ನು ತಿದ್ದುಪಡಿ ಮಾಡಬೇಕು. ಗ್ರಾಹಕ ರಕ್ಷಣಾ ಕಾನೂನಿನಡಿಯ ವೈದ್ಯರು ನೀಡಬೇಕಾದ ಪರಿಹಾರ ಧನಕ್ಕೆ ಮಿತಿ ವಿಧಿಸುವುದು. ಏಕ ವೈದ್ಯ ಚಿಕಿತ್ಸಾಲಯಗಳನ್ನು ಸಿಇಎ ಕಾನೂನಿನಿಂದ ಹೊರತುಪಡಿಸಿ, ಲೈಸೆನ್ಸ್ ರಾಜ್ ಪದ್ಧತಿಯನ್ನು ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಡಿ.ರಂದೀಪ್ಗೆ ಮನವಿ ಸಲ್ಲಿಸಿದರು.
ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ಡಾ.ಎಚ್. ಬಸವನ ಗೌಡಪ್ಪ, ಡಾ.ಸುರೇಶ್ ರುದ್ರಪ್ಪ, ಡಾ.ಎಸ್.ಪಿ. ಯೋಗಣ್ಣ, ಡಾ.ಪ್ರಕಾಶ್, ಡಾ.ಶರತ್ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು