ಪ್ರಮುಖ ಸುದ್ದಿಮೈಸೂರು

ತಯಾರಿ ನಡೆಸಿ ಬಿಡುಗಡೆ ಮಾಡುವ ಪ್ರಣಾಳಿಕೆಯಿಂದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ : ಡಾ.ಎಂ.ವೀರಪ್ಪ ಮೊಯ್ಲಿ

ಮೈಸೂರು,ಡಿ.23:- ಮೈಸೂರು ವಿಭಾಗದ ಐದು ಜಿಲ್ಲೆಗಳ ಸಮಸ್ಯೆ ವಿಚಾರವಾಗಿ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ವಿಷಯಕ್ಕೆ ಸಂಬಂಧಿಸಿದಂತೆ ಪ್ರಣಾಳಿಕೆ ಸಿದ್ಧತೆಗೆ ಕಾಂಗ್ರೆಸ್ ತಯಾರಿ ನಡೆಸಿದೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ತಿಳಿಸಿದರು.

ಮೈಸೂರಿನ  ಸದರ್ನ್ ಸ್ಟಾರ್ ಹೋಟೆಲ್ ನಲ್ಲಿ  ನಡೆದ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ಈಗಾಗಲೇ ನಾವು ಬಿಡುಗಡೆಗೊಳಿಸಿದ್ದ ಪ್ರಣಾಳಿಕೆಯನ್ನು ಪಾಲಿಸಿದ್ದೇವೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆದಿದೆ. ಕಳೆದ ಬಾರಿಯ ಅನ್ನಭಾಗ್ಯದಂತಹ ಮಹತ್ವಾಕಾಂಕ್ಷೆಯ ಯೋಜನೆಗಳ ಅನುಷ್ಠಾನಗೊಳಿಸಲು ಸಿದ್ಧತೆ ನಡೆಸುತ್ತಿದ್ದೇವೆ. ಅದೇ ರೀತಿ ಅನೇಕ ಕಾರ್ಯಕ್ರಮಗಳನ್ನ ಅನುಷ್ಠಾನಗೊಳಿಸಿ ಯಶಸ್ವಿಯಾಗಿದ್ದೇವೆ. ಜಿಡಿಪಿ ಯಲ್ಲಿ ಒಂದನೇ ಸ್ಥಾನ ಸೇರಿದಂತೆ ಬಂಡವಾಳ ಹೂಡಿಕೆಯಲ್ಲಿ ಒಂದನೇ ಸ್ಥಾನದಲ್ಲಿದ್ದೇವೆ. ಉಳಿದಂತೆ ಬಾಕಿ ಇರುವ ಕೆಲಸಗಳಲ್ಲೂ ಒಂದನೇ ಸ್ಥಾನಕ್ಕೆ ಬರುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಅತ್ಯಂತ ಕಡಿಮೆ ಮಟ್ಟದಲ್ಲಿ ಸಾಲ ಹೊಂದಿದ್ದೇವೆ. ಮುಂದಿನ ಚುನಾವಣೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿದೆ. ಈಗ ನಾವು ತಯಾರಿ ನಡೆಸಿ ಬಿಡುಗಡೆ ಮಾಡುವ ಪ್ರಣಾಳಿಕೆಯಿಂದ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದರು.

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು ಕಾಂಗ್ರೆಸ್ ಮುಕ್ತ ಮಾಡುತ್ತೇವೆಂದು ಬಿಜೆಪಿ ಹೊರಟಿದೆ. ಅದು ನಮ್ಮ ಸಂಸ್ಕೃತಿಯಲ್ಲ.  ನಾವು ಬೆಳೆದು ಮತ್ತೊಬ್ಬರನ್ನು ಬೆಳೆಸುತ್ತೇವೆ. ಇದು ನಮ್ಮ ಸಂಸ್ಕೃತಿ. ಗುಜರಾತ್ ಹಾಗೂ ಹಿಮಾಚಲ್ ಪ್ರದೇಶದಲ್ಲಿ ಬಿಜೆಪಿಯವರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಅಂದು ಬ್ಲ್ಯಾಕ್ ಮನಿ ತರುತ್ತೇವೆ ಎಂದಿದ್ದರು. ಎಲ್ಲರ  ಅಕೌಂಟ್ ಗೆ ಅದೇ ಹಣ ಹಾಕುತ್ತೇವೆ ಅಂದರು. ಈ ರೀತಿಯ ಹಲವು ವಿಷಯಗಳಿವೆ. ಹೇಳಿದಂತೆ ಯಾವುದನ್ನೂ ಈಡೇರಿಸಿಲ್ಲ ಎಂದರು. ವಾಮ ಮಾರ್ಗದಿಂದ ಬಿಜೆಪಿ ಗುಜರಾತ್ ನಲ್ಲಿ ಗೆಲುವು ಸಾಧಿಸಿದೆ. ಎಮೋಷನಲ್ ಬ್ಲ್ಯಾಕ್ ಮೇಲ್ ಮಾಡಿ ಗೆದ್ದಿದ್ದಾರೆ. ಗೆದ್ದ ನಂತರ ಬಿಜೆಪಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಮೋದಿಯವರ ನಡೆ ಪಾರ್ಲಿಮೆಂಟ್ ನ ವ್ಯವಸ್ಥೆಗೆ ಆಘಾತ ತರುವಂತಾಗಿದೆ. ಜಿಎಸ್ಟಿ ಕಂಪ್ಲೀಟ್ ಪ್ಲಾಪ್  ಆಗಿದೆ. ಹಿಮಾಚಲ್ ಪ್ರದೇಶದಂತೆ ಇಲ್ಲಿ ಆಗಲ್ಲ. ಕರ್ನಾಟಕವೇ ಬೇರೆ, ಕೇಂದ್ರದ ಯೋಜನೆಯಾದ ನರೇಗಾ ಯೋಜನೆಯ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರ ಹಣ ನೀಡಿಲ್ಲ. ಆದ್ದರಿಂದ ನರೇಗಾ ಕೆಲಸಗಳು ನೆನೆಗುದಿಗೆ ಬಿದ್ದಿವೆ. ಉಚಿತ ಆಹಾರ ವಿತರಣೆ ಕಾರ್ಯಕ್ರಮ ಕೇಂದ್ರ ಸರ್ಕಾರದ್ದಲ್ಲ. ನಮ್ಮ ರಾಜ್ಯ ಸರ್ಕಾರದ ಯೋಜನೆಯಾಗಿದೆ. ರೈತರ ವಿಚಾರವಾಗಿ ಕೇಂದ್ರ ಸರ್ಕಾರ ಒಂದು ಪೈಸೆ ನೀಡಿಲ್ಲ. ಹಾಗೇನಾದರೂ ಕೇಂದ್ರ ಹಣ ನೀಡಿದ್ದರೆ ಗುಟ್ಟಾಗಿ ಯಡಿಯೂರಪ್ಪನವರಿಗೆ ನೀಡಿರಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ವಾಸು, ಜಿ.ಪಂ.ಸದಸ್ಯೆ ಡಾ.ಪುಷ್ಪಾ ಅಮರನಾಥ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: