ದೇಶಪ್ರಮುಖ ಸುದ್ದಿ

ಕಾಂಡೋಮ್ ಖರೀದಿಸಲೂ ಆಧಾರ್ ನಂಬರ್ ಕೊಡುವ ಅಗತ್ಯವೇನಿದೆ? ಚಿದಂಬರಂ ಪ್ರಶ್ನೆ

ಮುಂಬೈ (ಡಿ.23): ಪ್ರತಿಯೊಂದು ವಿಷಯಕ್ಕೂ ಆಧಾರ್‍ ಕಡ್ಡಾಯಗೊಳಿಸುತ್ತಿರುವ ಕೇಂದ್ರ ಸರ್ಕಾರವು ದೇಶದ ಜನರ ಖಾಸಗಿ ವಿಚಾರಗಳಲ್ಲಿ ಇಣುಕುತ್ತಿದೆ. ಕಾಂಡೋಮ್‍ ಖರೀದಿಸಲು ಆಧಾರ್‍ ನಂಬರ್‍ ಕೊಡುವ ಅಗತ್ಯವೇನಿದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಮುಖಮಡ ಪಿ.ಚಿದಂಬರಮ್‍ ಪ್ರಶ್ನಿಸಿದ್ದಾರೆ.

ಐಐಟಿ ಬಾಂಬೆ ಶುಕ್ರವಾರ ಮುಂಬೈನಲ್ಲಿ ಏರ್ಪಡಿಸಿದ್ದ ಮೂಡ್ ಇಂಡಿಗೋ ಫೆಸ್ಟಿವಲ್‍ನಲ್ಲಿ ಆಧಾರ್ ವಿಷಯವಾಗಿ ಚಿದಂಬರಂ ಹಾಗೂ ಇನ್ಫೋಸಿಸ್ ಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ನಡುವೆ ಬಿಸಿ ಚರ್ಚೆಗೆ ಕಾರಣವಾಯಿತು.

ಪ್ರತಿಯೊಂದು ವಹಿವಾಟಿಗೂ ಆಧಾರ್ ಕಡ್ಡಾಯಗೊಳಿಸಿರುವುದನ್ನು ಕಟುವಾಗಿ ಟೀಕಿಸಿದ ಚಿದಂಬರಂ, ಅವಿವಾಹಿತ ಯುವ ಜೋಡಿಯೊಂದು ರಜೆಯನ್ನು ಖಾಸಗಿಯಾಗಿ ಕಳೆಯಬೇಕೆಂದು ನಿರ್ಧರಿಸಿದರೆ ಅದರಲ್ಲಿ ತಪ್ಪೇನಿದೆ? ಯುವಕ ಕಾಂಡೋಮ್ ಖರೀದಿಸಬೇಕಿದ್ದರೆ ಆತ ತನ್ನ ಆಧಾರ್ ಅಥವಾ ಗುರುತನ್ನು ಏಕೆ ಬಹಿರಂಗಪಡಿಸಬೇಕು? ಎಂದು ಪ್ರಶ್ನಿಸಿದರು.

ನಾನು ಯಾವ ಔಷಧಿಗಳನ್ನು ಖರೀದಿಸುತ್ತೇನೆ, ಯಾವ ಸಿನೆಮಾಗಳನ್ನು ನೋಡುತ್ತೇನೆ, ಯಾವ ಹೋಟೆಲುಗಳಲ್ಲಿ ತಂಗುತ್ತೇನೆ ಹಾಗೂ ನನ್ನ ಸ್ನೇಹಿತರು ಯಾರು ಎಂದು ಸರಕಾರವೇಕೆ ತಿಳಿದುಕೊಳ್ಳಬೇಕು? ನಾನು ಸರಕಾರದಲ್ಲಿ ಇದ್ದಿದ್ದರೆ ಜನರ ಖಾಸಗಿ ಬದುಕಿನಲ್ಲಿ ಇಣುಕುವ ಪ್ರಯತ್ನಗಳು ಪ್ರಬಲವಾಗಿ ವಿರೋಧಿಸುತ್ತಿದ್ದೆ ಎಂದು ಅವರು ಹೇಳಿದರು.

ಚಿದಂಬರಂ ವಾದವನ್ನು ಒಪ್ಪದ ನಾರಾಯಣಮೂರ್ತಿ, ನೀವು ಇಲ್ಲಿಯ ತನಕ ಹೇಳಿದ್ದೆಲ್ಲವೂ ಗೂಗಲ್ ಮುಖಾಂತರ ಲಭ್ಯವಿದೆ ಎಂದು ಕಾಲೆಳೆಯಲು ಪ್ರಯತ್ನಿಸಿದರು.

ಆದರೆ ಈ ಮಾತಿಗೆ ತಿರುಗೇಟು ನೀಡಿದ ಚಿದಂಬರಂ, ತಾವು ತಮ್ಮ ಬ್ಯಾಂಕ್ ಖಾತೆಯ ಜತೆ ಆಧಾರ್ ಸಂಖ್ಯೆ ಜೋಡಿಸಿಲ್ಲ. ಸುಪ್ರೀಂ ಕೋರ್ಟ್‍ನ ಸಾಂವಿಧಾನಿಕ ಪೀಠ ಜನವರಿ 17ರಂದು ವಿಚಾರಣೆ ಕೈಗೆತ್ತಿಕೊಳ್ಳುವ ತನಕ ಈ ಕಾರ್ಯ ನಿಲ್ಲಿಸಬೇಕು. ಈಗಲೂ ತಮ್ಮ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಜನರು ಸ್ವಯಂ ಆಗಿ ಜೋಡಿಸುತ್ತಿಲ್ಲ, ಬದಲಾಗಿ ಅವರಿಗೆ ಹರಿದು ಬರುತ್ತಿರುವ ಎಸ್ಸೆಮ್ಮೆಸ್ ಹಾಗೂ ಇಮೇಲ್ ಗಳನ್ನು ಗಮನಿಸಿ ಅವರು ಆಧಾರ್ ಸಂಖ್ಯೆ ಜೋಡಿಸುತ್ತಿದ್ದಾರೆ ಎಂದು ಹೇಳಿದರು.

ಸರಕಾರಿ ಸವಲತ್ತುಗಳನ್ನು ಒದಗಿಸಲು ಆಧಾರ್ ಕಡ್ಡಾಯ ಮಾಡುುದನ್ನು ನಾನು ವಿರೋಧಿಸುವುದಿಲ್ಲ. ಸ್ಮಶಾನದಲ್ಲಿಯೂ ಆಧಾರ್ ಕೇಳುತ್ತಾರೆ, ಇದು ಎಷ್ಟರ ಮಟ್ಟಿಗೆ ಸರಿ? ಕಾಂಡೋಮ್‍ ಖರೀದಿಸಲು ಆಧಾರ್ ನಂಬರ್ ಏಕೆ ಕೊಡಬೇಕು ಎಂದು ಚಿದಂಬರಂ ಪ್ರಶ್ನಿಸಿದರು.

ಕೊನೆಗೆ “ಆಧಾರ್ ವಿಚಾರದಲ್ಲಿ ಜನರ ಖಾಸಗಿತನವನ್ನು ರಕ್ಷಿಸಲು ಸಂಸತ್ತು ಸೂಕ್ತ ಕಾನೂನು ಜಾರಿಗೊಳಿಸಬೇಕು” ಎಂದು ನಾರಾಯಣ ಮೂರ್ತಿ ಅವರು ಹೇಳುವುದರೊಂದಿಗೆ ಚಿದಂಬರಂ ವಾದ್ಕೆ ಸಹಮತ ವ್ಯಕ್ತಪಡಿಸಿದರು.

(ಎನ್‍ಬಿ)

Leave a Reply

comments

Related Articles

error: