
ಪ್ರಮುಖ ಸುದ್ದಿಮೈಸೂರು
ನೋಟು ರದ್ದು ಪರಿಣಾಮ: ಪಾಲಿಕೆಗೆ 4 ದಿನಗಳಲ್ಲಿ 5 ಕೋಟಿ ರು. ತೆರಿಗೆ ಸಂಗ್ರಹ
ಕೇಂದ್ರ ಸರಕಾರ 500 ಹಾಗೂ 1000 ರು. ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆಗೆ 4 ದಿನಗಳಲ್ಲಿ 5 ಕೋಟಿ ರು. ತೆರಿಗೆ ಸಂಗ್ರಹವಾಗಿದೆ. ಇಲ್ಲಿಯವರೆಗೆ ನಗರ ಪಾಲಿಕೆಗೆ ತಿಂಗಳಿಗೆ 4ರಿಂದ 5 ಲಕ್ಷ ರು.ಗಳು ಮಾತ್ರ ತೆರಿಗೆ ಹರಿದುಬರುತ್ತಿತ್ತು. ತೆರಿಗೆ ಕಟ್ಟುವಂತೆ ಸಾರ್ವಜನಿಕರಿಗೆ ಎಷ್ಟೇ ಅರಿವು ಮೂಡಿಸಿದ್ದರೂ, ಮನವಿ ಮಾಡಿದ್ದರೂ ನೀರಿನ ತೆರಿಗೆ ಹಾಗೂ ಮನೆ ಕಂದಾಯ ಕಟ್ಟಲು ವಿಳಂಬ ನೀತಿ ಅನುಸರಿಸುತ್ತಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು 500 ಹಾಗೂ 1000 ರು. ಮುಖಬೆಲೆಯ ನೋಟುಗಳನ್ನು ಬದಲಿಸಲು ಬ್ಯಾಂಕುಗಳ ಮುಂದೆ ಸಾಲುಗಟ್ಟಿ ನಿಲ್ಲುವ ಸಂಕಷ್ಟದಿಂದ ತಪ್ಪಿಸಿಕೊಳ್ಳಲು ಹಳೆಯ 500 ಹಾಗೂ 1000 ರು. ನೋಟುಗಳನ್ನು ಕಂದಾಯವಾಗಿ ನೀಡುತ್ತಿದ್ದಾರೆ.
ಮೇಯರ್ ಬಿ.ಎಲ್. ಭೈರಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹಳೆಯ ನೋಟುಗಳನ್ನೇ ಪಾವತಿಸಲು ಕೇಂದ್ರ ಸರಕಾರ ನ.24ರವರೆಗೆ ಅವಕಾಶ ಮಾಡಿಕೊಟ್ಟಿದೆ. ಯಾರೆಲ್ಲ ಬಾಕಿ ಉಳಿಸಿಕೊಂಡಿದ್ದೀರೋ ದಯಮಾಡಿ ಹಣ ಪಾವತಿಸಿ. ನಿಮ್ಮಲ್ಲಿರುವ ನೋಟುಗಳನ್ನು ವ್ಯರ್ಥವಾಗಿ ಬಿಸಾಡುವ ಬದಲು ನಿಮ್ಮ ಮನೆಯ ಕಂದಾಯ ಹಾಗೂ ನೀರಿನ ಕಂದಾಯವನ್ನು ಪಾವತಿಸಿ ಎಂದು ಮಹಾಪೌರರು ಕೇಳಿಕೊಂಡಿದ್ದಾರೆ.