ಕರ್ನಾಟಕ

ಯಳಂದೂರಿನಲ್ಲಿ ಕೋತಿಗಳ ಹಾವಳಿ ತಪ್ಪಿಸಲು ಒತ್ತಾಯ

ರಾಜ್ಯ(ಚಾಮರಾಜನಗರ)ಡಿ.25:- ಯಳಂದೂರು ಪಟ್ಟಣದ ಹಲವು ಬಡಾವಣೆಗಳಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿರುವುದು ನಿವಾಸಿಗಳಿಗೆ ತಲೆನೋವಾಗಿ ಪರಿಣಮಿಸಿದ್ದು ಇವುಗಳ ಹಾವಳಿ ತಡೆಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಪಟ್ಟಣದ ಅಗ್ರಹಾರ ಬಡಾವಣೆ, ದೇವಾಂಗ ಬೀದಿ, ಎಲೆಕೇರಿ ಬಡಾವಣೆ, ಮೊತ್ತದಕೇರಿ, ಗೌತಮ್ ಬಡಾವಣೆಗಳಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು ಮನೆಗಳ ಮೇಲೆ ದಾಳಿ ಮಾಡುವ ಕೋತಿಗಳು ಹೆಂಚುಗಳನ್ನು ಒಡೆಯುವುದಲ್ಲದೆ ಕಿಟಕಿ, ಬಾಗಿಲುಗಳ ಮೂಲಕ ಮನೆಗಳ ಒಳ ಹೋಗಿ ತೊಂದರೆ ಮಾಡುತ್ತಿವೆ. ಇದರಿಂದ ಇಲ್ಲಿನ ನಿವಾಸಿಗಳು ಕೋತಿಗಳ ಹಾವಳಿಯಿಂದ ಭಯಭೀತರಾಗಿದ್ದು ಕಿಟಕಿ, ಬಾಗಿಲುಗಳನ್ನು ತೆರೆಯಲು ಹೆದರುವಂತಾಗಿದೆ. ಜೊತೆಗೆ ಕೋತಿಗಳನ್ನು ಓಡಿಸಲು ಹೋದ ಸಂದರ್ಭದಲ್ಲೂ ಜನರ ಮೇಲೆ ದಾಳಿ ಮಾಡುವ ಕೋತಿಗಳು ಗಾಯಗೊಳಿಸಿದೆ. ಹಿಂಡು ಹಿಂಡಾಗಿ ದಾಳಿ ಮಾಡುವ ಕೋತಿಗಳು ಮನೆಗಳಲ್ಲಿರುವ ವಸ್ತುಗಳನ್ನು ಎತ್ತಿಕೊಂಡು ಹೋಗುತ್ತವೆ. ಇದರಿಂದ ಭಯದಲ್ಲಿಯೇ ಇಲ್ಲಿನ ನಿವಾಸಿಗಳು ವಾಸಿಸಬೇಕಾಗಿದೆ. ಅಲ್ಲದೇ ಸಂಬಂಧಪಟ್ಟ ಪಟ್ಟಣ ಪಂಚಾಯಿತಿಗೆ ಕೋತಿಗಳ ಹಾವಳಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳುವಂತೆ ಹಲವು ಭಾರಿ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಸಣ್ಣಪುಟ್ಟ ಮಕ್ಕಳ ಮೇಲೂ ದಾಳಿ ಮಾಡಿ ಗಾಯಗೊಳಿಸಿರುವ ನಿದರ್ಶನಗಳಿದೆ. ಆದ್ದರಿಂದ ಕೋತಿಗಳ ಹಾವಳಿಯಿಂದ ಉಂಟಾಗುತ್ತಿರುವ ತೊಂದರೆಗಳನ್ನು ಕೂಡಲೇ ಸಂಬಂಧಪಟ್ಟವರು ಬಗೆಹರಿಸುವ ಮೂಲಕ ಕೋತಿಗಳ ಹಾವಳಿಗೆ ಕಡಿವಾಣ ಹಾಕಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಪಟ್ಟಣದ ನಿವಾಸಿಗಳು ಆಗ್ರಹಿಸಿದ್ದಾರೆ. (ಜಿ.ಎನ್,ಎಸ್.ಎಚ್)

Leave a Reply

comments

Related Articles

error: