ಮೈಸೂರು

ಹೊಸ ವರ್ಷದ ಪ್ರಯುಕ್ತ ಜನವರಿ 1ರಂದು ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ತಿರುಪತಿ ಮಾದರಿಯ ಲಡ್ಡು ವಿತರಣೆ

ಮೈಸೂರು,ಡಿ.26:- ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷದ ಪ್ರಯುಕ್ತ ಜನವರಿ 1ರಂದು ಬೆಳಗಿನ ಜಾವ 4ರಿಂದ ರಾತ್ರಿ 12ರವರೆಗೆ ಎರಡು ಲಕ್ಷ ತಿರುಪತಿ ಮಾದರಿಯ ಲಡ್ಡುವನ್ನು ಭಕ್ತಾದಿಗಳಿಗೆ ವಿತರಿಸಲಾಗುವುದು ಎಂದು ದೇವಳದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್  ತಿಳಿಸಿದರು.

ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಹಲವಾರು ವರ್ಷಗಳಿಂದ ತಪ್ಪದೇ ನಡೆಸಿಕೊಂಡು ಬರಲಾಗುತ್ತಿದ್ದು, ಈ ವರ್ಷವೂ ಕೂಡ ಕ್ರೈಸ್ತ ವರ್ಷಾರಂಭದ ಅಂಗವಾಗಿ ಜ.1ರಂದು ಬೆಳಿಗ್ಗೆ 4ಗಂಟೆಗೆ ಆರಂಭಿಸಿ ಶ್ರೀಯೋಗಾನರಸಿಂಹಸ್ವಾಮಿ ದೇವರಿಗೆ ವಿಶೇಷ ಅಲಂಕಾರ, ಮತ್ತು ಶ್ರೀರಂಗಕ್ಷೇತ್ರದಿಂದ ತರಿಸಿರುವ ವಿಶೇಷ ತೋಮಾಲೆ ಮತ್ತು ಸ್ವರ್ಣಪುಷ್ಪದಿಂದ ಸಹಸ್ರನಾಮಾರ್ಚನೆ ಮತ್ತು ದೇವಾಲಯದ ತ್ಸವ ಮೂರ್ತಿಯಾದ ಶ್ರೀಮಲಯಪ್ಪನ್ ಸ್ವಾಮಿ, ಪದ್ಮಾವತಿ ಮತ್ತು ಮಹಾಲಕ್ಷ್ಮಿ ದೇವರಿಗೆ ದೇವಾಲಯದ ಆವರಣದಲ್ಲಿ ಏಕಾದಶ ಪ್ರಾಕಾರೋತ್ಸವ ಹಾಗೂ ಹತ್ತು ಕ್ವಿಂಟಾಲ್ ಪುಳಿಯೋಗರೆ ನಿವೇದನೆ ಮತ್ತು ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ಎರಡು ಲಕ್ಷ ತಿರುಪತಿ ಮಾದರಿಯ ಲಡ್ಡು ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಈ ವರ್ಷ ಎರಡು ಲಕ್ಷ ಲಡ್ಡುವನ್ನು ವಿತರಣೆ ಮಾಡಲು ದೇವಸ್ಥಾನದ ವತಿಯಿಂದ ತಯಾರಿ ನಡೆಯುತ್ತಿದೆ. ಈ ವರ್ಷ ಅಂದಾಜು 1500ಗ್ರಾಂ ತೂಕದ 5000ಲಡ್ಡುಗಳು, ಹಾಗೂ 100ಗ್ರಾಂ ತೂಕದ 2ಲಕ್ಷ ಲಡ್ಡುಗಳನ್ನು ದೇವಾಯಕ್ಕೆ ಬರುವ ಎಲ್ಲಾ ಭಕ್ತಾದಿಗಳಿಗೆ ಜಾತಿ ಮತ ಮತ್ತು ಭೇದವಿಲ್ಲದೇ ಉಚಿತವಾಗಿ ವಿತರಿಸಲಾಗುವುದು ಎಂದರು. ಲಡ್ಡು ಪ್ರಸಾದವನ್ನು ವಿಶೇಷವಾಗಿ 50ಮಂದಿ ನುರಿತ ಬಾಣಸಿಗರಿಂದ ತಯಾರಿಸಲಾಗಿದ್ದು, ಲಡ್ಡು ತಯಾರಿ ಕಾರ್ಯ ಡಿ.21ರಿಂದ 31ರವರೆಗೂ ನಡೆಯಲಿದೆ.

ಲಡ್ಡು ತಯಾರಿಕೆಗೆ 50ಕ್ವಿಂಟಾಲ್ ಕಡ್ಲೆ ಹಿಟ್ಟು, 100ಕ್ವಿಂಟಾಲ್ ಸಕ್ಕರೆ, 4000ಲೀ.ಖಾದ್ಯತೈಲ, 100ಕೆ.ಜಿ.ಗೋಡಂಬಿ,100ಕೆ.ಜಿ.ಒಣದ್ರಾಕ್ಷಿ,50ಕೆ.ಜಿ.ಬಾದಾಮಿ,50ಕೆ.ಜಿ.ಡೈಮಂಡ್ ಸಕ್ಕರೆ, 500ಕೆ.ಜಿ.ಬೂರಾ ಸಕ್ಕರೆ,10ಕೆಜಿ ಪಿಸ್ತಾ,20ಕೆ.ಜಿ.ಏಲಕ್ಕಿ,20ಕೆ.ಜಿ.ಜಾಕಾಯಿ ಮತ್ತು ಜಾಪತ್ರೆ, 5ಕೆ.ಜಿ.ಪಚ್ಚ ಕರ್ಪೂರ,50ಕೆ.ಜಿ.ಲವಂಗಗಳನ್ನು ಬಳಸಿ ತಯಾರಿಸಲಾಗಿದೆ ಎಂದು ತಿಳಿಸಿದರು. ಲೋಕಕಲ್ಯಾಣಾರ್ಥವಾಗಿ ಮತ್ತು ದೇಶದ ಎಲ್ಲಾ ಜನರ ಒಳಿತಿಗಾಗಿ ಪ್ರಾರ್ಥಿಸಿ ಈ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ಪ್ರೊ.ಭಾಷ್ಯಂ ಸ್ವಾಮೀಜಿಯವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: