ಕರ್ನಾಟಕಪ್ರಮುಖ ಸುದ್ದಿ

ಪರಿಣತರ ತಂಡಕ್ಕೆ ನಮ್ಮ ಬೆಂಬಲವಿದೆ: ಲಿಂಗಾಯತ ಸ್ವತಂತ್ರ ಧರ್ಮ ವೇದಿಕೆ ಅಧ್ಯಕ್ಷ ಹೊರಟ್ಟಿ

ಬೆಂಗಳೂರು (ಡಿ.26): ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡುವ ಕುರಿತು ಅಧ್ಯಯನ ನಡೆಸಲು ಪರಿಣತರ ಸಮಿತಿ ರಚಿಸಿರುವ ಸರ್ಕಾರದ ನಿರ್ಧಾರವನ್ನು ಬೆಂಬಲಿಸುತ್ತೇವೆ ಎಂದು ಲಿಂಗಾಯತ ಸ್ವತಂತ್ರ ಧರ್ಮ ವೇದಿಕೆಯ ಅಧ್ಯಕ್ಷ ಬಸವರಾಜ ಹೊರಟ್ಟಿ ಹಾಗೂ ಸಂಚಾಲಕ
ಎಸ್.ಎಂ.ಜಾಮದಾರ ಅವರು ಹೇಳಿಕೆ ನೀಡಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವತಂತ್ರ ಧರ್ಮ ಮಾನ್ಯತೆಗಾಗಿ ಮನವಿ ಸಲ್ಲಿಸಿದ ಐದು ಗುಂಪುಗಳು ಈ ವಿಷಯದಲ್ಲಿ ಒಮ್ಮತಕ್ಕೆ ಬಂದಿಲ್ಲ. ಹೀಗಾಗಿ, ಎಲ್ಲ ದಾಖಲೆಗಳನ್ನೂ ಪರಿಶೀಲಿಸಿ ಶಿಫಾರಸು ಮಾಡಲು ಅಲ್ಪಸಂಖ್ಯಾತ ಆಯೋಗವು ಸಮತಿ ರಚನೆ ಮಾಡಿದೆ. ಸಮಿತಿ ರಚನೆಗೆ ನಮ್ಮ ಆಕ್ಷೇಪವಿಲ್ಲ, ಬೆಂಬಲವಿದೆ ಎಂದು ತಿಳಿಸಿದರು.

ಪರಿಣಿತರ ತಂಡ ವಿಸರ್ಜನೆ ಬೇಡಿಕೆ ಸರಿಯಲ್ಲ :

ಗದಗದಲ್ಲಿ ನಡೆದ ಸಮಾವೇಶದಲ್ಲಿ ಪರಿಣಿತರ ಸಮಿತಿ ವಿಸರ್ಜಿಸಬೇಕು ಎಂದು ಕೆಲವು ಮಠಾಧೀಶರು ಒತ್ತಾಯಿಸಿರುವುದು ಸರಿಯಲ್ಲ. ಬಿಜೆಪಿ ಜತೆಗಿರುವ ಕೆಲವು ಸ್ವಾಮೀಜಿಗಳು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಎಲ್ಲ ಸ್ವಾಮೀಜಿಗಳು ಸೇರಿ ಬಿಜೆಪಿಯ ರಾಜ್ಯ ನಾಯಕರ ಮೇಲೆ ಒತ್ತಡ ತಂದು, ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ಕೊಡಿಸಿದರೆ ನಾವು ಒಪ್ಪಿಕೊಳ್ಳುತ್ತೇವೆ. ಬಿಜೆಪಿ ನಾಯಕರು ಈ ಕೆಲಸ ಮಾಡಲಿ, ಅದು ಬಿಟ್ಟು ಸಮಿತಿ ವಿಸರ್ಜನೆಗೆ ಒತ್ತಾಯಿಸಿರುವುದು ಸಿರಲ್ಲ ಎಂದು ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ವೀರಶೈವ ಪದಕ್ಕೆ ವಿರೋಧ :

ವೀರಶೈವ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡಿ ಎಂದು ಈ ಹಿಂದೆ ಶಿಫಾರಸು ಮಾಡಿದ್ದರಿಂದ ಕೇಂದ್ರ ಸರ್ಕಾರ ತಿರಸ್ಕರಿಸಿತ್ತು. ಈಗಲೂ ಅದೇ ಕಾರಣಕ್ಕೆ ವೀರಶೈವ ಪದ ಕೈಬಿಡಬೇಕು ಎಂಬುದು ನಮ್ಮ ಆಗ್ರಹ. ಸಿಖ್‌ ಮತ್ತು ಜೈನ ಧರ್ಮೀಯರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕಿದ್ದರೂ ಅವರು ಹಿಂದೂಸ್ತಾನಿಯರೇ. ನಮ್ಮದೂ ಅದೇ ನಿಲುವು. ನಾವು ಹಿಂದೂಸ್ತಾನಿಯರೇ. ಆದರೆ ನಮ್ಮ ಧರ್ಮ ಬೇರೆ ಎಂದು ಹೊರಟ್ಟಿ ಆಗ್ರಹಿಸಿದರು.

ಸಮಿತಿ ಏಕಮುಖವಲ್ಲ :

ಲಿಂಗಾಯತ ಸ್ವತಂತ್ರ ಧರ್ಮ ಪ್ರತಿಪಾದನೆ ಮಾಡುವವರೇ ಸಮಿತಿಯಲ್ಲಿ ಇದ್ದಾರಾಲ್ಲ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಹೊರಟ್ಟಿ ಅವರು 1881ರಿಂದ 1942ರ ಅವಧಿಯ ದಾಖಲೆಗಳು ನಮ್ಮ ಬಳಿ ಇವೆ. ಸಮಿತಿಗೆ ನಾವು ದಾಖಲೆ ಕೊಡುತ್ತೇವೆ, ಅವರೂ ದಾಖಲೆ ಕೊಡಲಿ. ಸಮಿತಿಯ ಅಧ್ಯಕ್ಷರಾಗಿರುವ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್‌ ಅವರು ಎಲ್ಲವನ್ನೂ ಪರಾಮರ್ಶಿಸಿ, ಸೂಕ್ತ ಶಿಫಾರಸು ಮಾಡಲಿದ್ದಾರೆ. ಸಮಿತಿಗೆ ತನ್ನದೇ ಆದ ಹೊಣೆಗಾರಿಕೆ, ಗೌರವ ಇದೆ. ಸಮಿತಿಯಲ್ಲಿ ಅವರೇ ಇರಬೇಕು, ಇವರೇ ಇರಬೇಕು ಎಂದು ಹೇಳುವುದು ಸರಿಯಲ್ಲ. ವಾಸ್ತವದ ನೆಲೆಗಟ್ಟಿನಲ್ಲಿ ಸಮಿತಿ ವರದಿ ಕೊಡುವ ವಿಶ್ವಾಸವಿದೆ ಎಂದರು.

ಸಮಿತಿಯಲ್ಲಿ ರಾಮಕೃಷ್ಣ ಮರಾಠೆ, ಮುಜ್ಹಪ್ಹರ್ ಅಸ್ಸಾದಿ, ಪುರುಷೋತ್ತಮ ಬಿಳಿಮಲೆ ಇದ್ದಾರೆ. ಅವರು ಯಾರೂ ಲಿಂಗಾಯತ ಧರ್ಮದ ಪರ ಹೋರಾಟದಲ್ಲಿ ಗುರುತಿಸಿಕೊಂಡವರಲ್ಲ ಎಂದು ಜಾಮದಾರ ಪ್ರತಿಪಾದಿಸಿದರು. ಪಂಚಪೀಠ, ವಿರಕ್ತ ಮಠದವರಿಗೆ ಒಪ್ಪಿಗೆಯಾಗುವಂತಹ ಪ್ರತಿನಿಧಿಗಳು ಸಮಿತಿಯಲ್ಲಿ ಇರಬೇಕಿತ್ತು ಎಂಬ ವಾದ ಸರಿಯಲ್ಲ. ಸಮಿತಿ ರಚಿಸುವ ಮುನ್ನ ನಮ್ಮ ಅಭಿಪ್ರಾಯವನ್ನೂ ಸರ್ಕಾರ ಕೇಳಿಲ್ಲ.

(ಎನ್‍ಬಿ)

Leave a Reply

comments

Related Articles

error: