ಕರ್ನಾಟಕಪ್ರಮುಖ ಸುದ್ದಿ

ಮಹದಾಯಿ ವಿವಾದ: ಡಿ.27ರಂದು ಉತ್ತರ ಕರ್ನಾಟಕ ಬಂದ್‍ಗೆ ಕರೆ

ಹುಬ್ಬಳ್ಳಿ (ಡಿ.26): ಮಹದಾಯಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ರಾಜಕಾರಣಿಗಳು ಇಚ್ಛಾಶಕ್ತಿ ಪ್ರದರ್ಶನ ಮಾಡುತ್ತಿಲ್ಲವೆಂದು ಆಕ್ರೋಶಗೊಂಡಿರುವ ರೈತರು ಡಿ.27ರಂದು ಉತ್ತರ ಕರ್ನಾಟಕ ಬಂದ್‍ಗೆ ಕರೆ ನೀಡದ್ದಾರೆ.

ಕೇಂದ್ರ, ರಾಜ್ಯ ಸರ್ಕಾರಗಳ ಆಸಕ್ತಿ ಕೊರತೆ ಖಂಡಿಸಿ ನಾಲ್ಕು ಜಿಲ್ಲೆಗಳಲ್ಲಿ ಬಂದ್‍ಗೆ ಕರೆ ನೀಡಲಾಗಿದೆ. ಬಂದ್ ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ಮಲಪ್ರಭಾ, ಮಹದಾಯಿ, ಕಳಸಾ-ಬಂಡೂರಿ ರೈತ ಹೋರಾಟ ಸಮಿತಿ ಮನವಿ ಮಾಡಿದೆ.

ಹುಬ್ಬಳ್ಳಿಯ ಸರ್ಕಿಟ್ ಹೌಸ್‍ನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಮಿತಿಯ ಗೌರವಾಧ್ಯಕ್ಷ ಶಿವಣ್ಣ ಹುಬ್ಬಳ್ಳಿ, ಜೆಡಿಎಸ್ ಮುಖಂಡ ರಾಜಣ್ಣ ಕೊರವಿ ಅವರುಗಳು, ಬುಧವಾರ ಮಹದಾಯಿ ಅಚ್ಚುಕಟ್ಟು ಪ್ರದೇಶದ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಸಂಪೂರ್ಣ ಬಂದ್ ಆಚರಿಸಲು ಕರೆ ನೀಡಲಾಗಿದೆ ಎಂದು ತಿಳಿಸಿದರು.

ಎಲ್ಲ‌ ಅಂಗಡಿ, ಹೋಟೆಲ್, ವಾಣಿಜ್ಯ ‌ವಹಿವಾಟುಗಳನ್ನು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ನಿಲ್ಲಿಸಬೇಕು. ಬಸ್ ಸಂಚಾರ, ಆಟೊ‌ ಸಂಚಾರವೂ ಸಹ ಇರುವುದಿಲ್ಲ. ಆದರೆ ಔಷಧ ಅಂಗಡಿ, ಆಸ್ಪತ್ರೆಗಳು, ಆಂಬುಲನ್ಸ್’ಗಳಿಗೆ ತಡೆ ಒಡ್ಡುವುದಿಲ್ಲ. ನಾಳೆ ಬಂದ್‍ ಯಶಸ್ವಿಯಾದ ನಂತರ ದೆಹಲಿಗೆ ತೆರಳಿ ರಾಜ್ಯದ ಎಲ್ಲ 28 ಸಂಸದರ ಮನೆ ಎದುರು ಧರಣಿ‌ ನಡೆಸಲು ನಿರ್ಧರಿಸಿದ್ದೇವೆ ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಸಂಕಷ್ಟ:

ಬಂದ್‍ನಿಂದಾಗಿ ಪರೀಕ್ಷೆ ಎದುರಿಸಬೇಕಾಗಿದ್ದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಸ್‍ ಸಂಚಾರ ಆಟೋ ಸಂಚಾರ ಸಂಪೂರ್ಣ ಸ್ಥಗಿತವಾಗುವುದರಿಂದ ಸ್ವಂತ ವಾಹನ ವ್ಯವಸ್ಥೆ ಇಲ್ಲದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ತಲುಪುವುದು ಕಷ್ಟವಾಗಬಹುದು.

ಕರ್ನಾಟಕ ‌ವಿಶ್ವವಿದ್ಯಾಲಯದ ಪರೀಕ್ಷೆಗಳನ್ನೂ ‌ಮುಂದೂಡುವಂತೆ ಕುಲಸಚಿವರಿಗೆ‌ ಮನವಿ ಮಾಡಲಾಗಿದೆ ಎಂದು ಸಮಿತಿ ತಿಳಿಸಿದೆ. ಆದರೆ ಪರೀಕ್ಷೆಗಳನ್ನು ವಿ.ವಿ ಮುಂದೂಡದಿದ್ದರೆ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುವುದು ಅನಿವಾರ್ಯವಾಗಲಿದೆ.

(ಎನ್‍ಬಿ)

Leave a Reply

comments

Related Articles

error: