ಮೈಸೂರು

ಭದ್ರತಾ ಸಿಬ್ಬಂದಿ ಕೊಲೆ ಪ್ರಕರಣ: ಇಬ್ಬರ ಬಂಧನ

ಅಕ್ಟೋಬರ್ 21ರಂದು ನಡೆದಿದ್ದ ಭದ್ರತಾ ಸಿಬ್ಬಂದಿ ವೆಂಕಟ ರಂಗಯ್ಯ(67) ಕೊಲೆ ಪ್ರಕರಣವನ್ನು ಭೇದಿಸಿದ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸುರೇಶ್(32) ಮತ್ತು ಪ್ರದೀಪ್(30) ಬಂಧಿತರು.

ಸರಕಾರಿ ಪಿಯು ಕಾಲೇಜೊಂದರ ಭದ್ರತಾ ಸಿಬ್ಬಂದಿಯಾಗಿದ್ದ ವೆಂಕಟ ರಂಗಯ್ಯ ಅವರ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಬ್‍ಇನ್ಸ್ ಪೆಕ್ಟರ್ ಸತೀಶ್ ನೇತೃತ್ವದಲ್ಲಿ ಮಧುಕರ್, ಪ್ರಕಾಶ್, ಚೇತನ್ ಮತ್ತು ಮಹೇಶ್ ಅವರು ಒಳಗೊಂಡಿರುವ ತಂಡವೊಂದು ಕೊಲೆ ಪ್ರಕರಣದ ತನಿಖೆ ಆರಂಭಿಸಿತ್ತು. ಟವರ್ ಲೊಕೇಶನ್ ತಂನತ್ರಜ್ಞಾನದ ಸಹಾಯದೊಂದಿಗೆ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರದೀಪ್ ಮತ್ತು ಸುರೇಶ್ ಇವರಿಬ್ಬರು ದೀರ್ಘಕಾಲದಿಂದ ನಿರುದ್ಯೋಗಿಗಳಾಗಿದ್ದು, ಮೊಬೈಲ್ ಕಳ್ಳತನ ಜಾಲವೊಂದರಲ್ಲಿದ್ದರು ಎನ್ನಲಾಗಿದೆ. ಕೊಲೆ ನಡೆದ ರಾತ್ರಿ ಇವರಿಬ್ಬರು ವೆಂಕಟ್‍ ಅವರನ್ನು ಭೇಟಿಯಾಗಿ ಹಣದ ವಿಷಯವಾಗಿ ಗಲಾಟೆ ಮಾಡಿ, ಕಲ್ಲಿನಿಂದ ಸಾಯಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಇಬ್ಬರು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಇಬ್ಬರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಈ ಪ್ರಕರಣವನ್ನು ಭೇದಿಸಿದ ಪೊಲೀಸ್ ತಂಡಕ್ಕೆ ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ ವಿಶೇಷ ಬಹುಮಾನ ಘೋಷಿಸಿದ್ದಾರೆ.

Leave a Reply

comments

Related Articles

error: